ಶಿವಭಾಗ್: ಮತದಾರರ ಪಟ್ಟಿಯಲ್ಲಿ ಆಧಾರ್ ಲಿಂಕ್ ಕಾರ್ಯಕ್ರಮ

ಮಂಗಳೂರು, ಸೆ.5: ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುವ ಯೋಜನೆಯು ಚುನಾವಣಾ ಆಯೋಗವು ಕಡ್ಡಾಯ ಮಾಡಿದ್ದು, ಸುಪ್ರೀಂ ಕೋರ್ಟ್ ಇದು ಕಡ್ಡಾಯವಲ್ಲ ಎಂದು ಹೇಳಿದರೂ, ಈ ಹಿಂದೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿ, ಈಗ ಕಡ್ಡಾಯ ಮಾಡಲಾಗುತ್ತಿದೆ. ಅದೇರೀತಿ ಅಕ್ರಮ ಮತದಾರರ ಪಟ್ಟಿಯನ್ನು ತಪ್ಪಿಸಲು ಲಿಂಕ್ ಯೋಜನೆ ಉಪಯುಕ್ತವಾಗಿದೆ ಮತ್ತು ಹೊಸ ಮತದಾರರ ಸೇರ್ಪಡೆಯನ್ನು ಮನೆಯಲ್ಲಿಯೇ ಕುಳಿತು ಒನ್‌ಲೈನ್ ಮೂಲಕ ನೊಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು, ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ನೋಂದಾಯಿಸಲು ಮತ್ತು ಅದರಲ್ಲಿ ಆಗುತ್ತಿರುವ ಅಕ್ರಮವನ್ನು ತಪ್ಪಿಸಲು ಉಪಯುಕ್ತವಾಗಿದೆ ಎಂದು ಮಾಜಿ ಶಾಸಕ ಐವನ್ ಡಿಸೋಜ ಹೇಳಿದ್ದಾರೆ.
ಶಿವಭಾಗ ವಾರ್ಡಿನಲ್ಲಿ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುವ ಮತ್ತು ಸೇರ್ಪಡೆ ಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ಭಾಗವಹಿಸಿ, ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುವುದರ ಜೊತೆಗೆ 50ಕ್ಕೂ ಅಧಿಕ ಮಂದಿ ಹೊಸ ಮತದಾರರು ನೋಂದಾಯಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್ ಭಾಸ್ಕರ್ ರೈ, ಹಬೀಬುಲ್ಲ, ರಮಾನಂದ ಪೂಜಾರಿ, ಟಿ.ಕೆ. ಸುಧೀರ್, ನವಾಝ್ ಮಹಕಾಳಿಪಡ್ಪು, ಆಲಿಸ್ಟನ್ ಡಿಕುನ್ಹಾ, ಮೀನಾ ಟೆಲ್ಲಿಸ್, ಪಿಯೂಸ್ ಮೊಂತೆರೊ, ಕಿರಣ್ ಜೇಮ್ಸ್, ಮುಂತಾದವರು ಭಾಗವಹಿಸಿದರು.
ಪ್ರವೀಣ್ ಜೇಮ್ಸ್ ಸ್ವಾಗತಿಸಿದರು.
