ಕೊರಗ ಸಮುದಾಯದ ಚಿಕಿತ್ಸಾ ಸೌಲಭ್ಯ ರದ್ದು; ಸರಕಾರದ ಕ್ರಮಕ್ಕೆ ಸಿಪಿಐ(ಎಂ) ತೀವ್ರ ವಿರೋಧ

ಉಡುಪಿ, ಸೆ.5: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೊರಗರು ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಮತ್ತು ಅಂಚಿಗೆ ತಳಲ್ಪಟ್ಟ ಸಮುದಾಯವಾಗಿದೆ. ಅವರ ಜನಸಂಖ್ಯೆ ತೀರಾ ಕಡಿಮೆ ಇದೆ, ಮಾತ್ರವಲ್ಲ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಇಂಥ ಕೊರಗ ಸಮುದಾಯದ ಆರೋಗ್ಯ ಚಿಕಿತ್ಸೆಗೆ ನೀಡುತಿದ್ದ ಅನುದಾನವನ್ನು ರದ್ದುಗೊಳಿಸಿ ಸರಕಾರ ಹೊರಡಿಸಿದ ಆದೇಶವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ವಿರೋಧಿಸಿದೆ.
ಸಿಪಿಎಂನ ಉಡುಪಿ ಜಿಲ್ಲಾ ಸಮಿತಿ ಕೊರಗ ಸಮುದಾಯಕ್ಕೆ ಆರೋಗ್ಯ ಚಿಕಿತ್ಸಾ ಸೌಲಭ್ಯ ಹಿಂತೆಗೆದುಕೊಂಡ ಕ್ರಮವನ್ನು ವಿರೋಧಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಅದನ್ನು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದೆ.
ಯಾವುದೇ ರಾಜಕೀಯ ಪ್ರಭಾವವನ್ನೂ ಹೊಂದಿರದ ಅತೀ ಹಿಂದುಳಿದ ಈ ಸಮುದಾಯದ ಆರೋಗ್ಯ ರಕ್ಷಣೆಗೋಸ್ಕರ ಉಚಿತ ವೈದ್ಯಕೀಯ ವೆಚ್ಚವನ್ನು ಸರಕಾರದ ವತಿಯಿಂದಲೇ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ (ಐಟಿಡಿಪಿ) ಮೂಲಕ ಈವರೆಗೂ ಒದಗಿಸಲಾಗುತ್ತಿತ್ತು. ಆಯುಷ್ಮಾನ್ ಮತ್ತಿತರ ಯೋಜನೆಗಳಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಕೊರಗರಿಗೆ ಪರಿಹಾರ ಸಿಗುತ್ತಿರಲಿಲ್ಲ ಎಂದು ಸಿಪಿಎಂ ಪತ್ರದಲ್ಲಿ ತಿಳಿಸಿದೆ.
ಆದರೆ ಈಗ ಸರಕಾರವು ಕುಡಿತ(ಮಧ್ಯಪಾನ) ಮತ್ತಿತರ ದುಶ್ಚಟದಿಂದ ಅವರ ಆರೋಗ್ಯ ಕೆಡುತ್ತಿದೆ ಎಂದು ಅವೈಜ್ಞಾನಿಕವಾಗಿ ಯಾವುದೇ ರೀತಿಯ ಅಧ್ಯಯನ, ದಾಖಲೆ ಇಲ್ಲದೆ ಉಚಿತ ಆರೋಗ್ಯ ಸೇವೆಯನ್ನು ಹಿಂತೆಗೆದು ಕೊಂಡಿದೆ. ಇದು ಆ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ೨೦ ವರ್ಷದ ಒಳಗಿನ ಮಕ್ಕಳು ಎರಡು ಮೂರು ತಿಂಗಳ ಅಂತರದಲ್ಲಿ ಸತ್ತಿದ್ದಾರೆ. ಅವರಿಗೆ ಯಾವುದೇ ದುಶ್ಚಟ ಇದ್ದಿರಲಿಲ್ಲ. ಪೌಷ್ಟಿಕಾಂಶದ ಕೊರತೆಯೇ ಅವರ ಸಾವಿಗೆ ಕಾರಣವಾಗಿತ್ತು ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಕಾರ್ಕಳದಲ್ಲಿ ೭ ವರ್ಷದ ಮಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದೆ. ಬೈಂದೂರು ಕಾಲೇಜು ಓದುವ ಹುಡುಗಿಯೊಬ್ಬಳ ೨ ಕಿಡ್ನಿ ವೈಫಲ್ಯವಾಗಿದೆ. ಬಾರ್ಕೂರಿನಲಿ ಮೊನ್ನೆ ಒಂದು ಹುಡುಗಿ ಸಾವು ಆಗಿದೆ ಎಂಬ ಮಾಹಿತಿ ಇದೆ. ರಕ್ತಹೀನತೆ, ಮಧುಮೇಹ, ಕಾಮಾಲೆ, ಕ್ಯಾನ್ಸರ್, ಹೃದಯ ಸಂಬಂಧೀ ಕಾಯಿಲೆಗಳಂಥ ಮಾರಕ ಖಾಯಿಲೆಗಳಿಂದ ಅವರು ಬಳಲುತ್ತಿದ್ದಾರೆ. ಆದರೂ ಇನ್ನು ಮುಂದೆ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ನೀಡುವುದಿಲ್ಲ ಎಂದು ಆದೇಶ ಹೊರಡಿಸಿರುವುದು ಅಮಾನವೀಯವಾಗಿದೆ ಎಂದು ಹೇಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಲು ಸರಕಾರಕ್ಕೆ ಉಡುಪಿಯ ಐಟಿಡಿಪಿ ಇಲಾಖೆ ಸರಿಯಾದ ಪ್ರಸ್ತಾವನೆ ಕಳುಹಿಸಿತ್ತು. ಆದರೆ ಉನ್ನತ ಮಟ್ಟದ ಅಧಿಕಾರಿಗಳು ಅದು ಹೇಗೆ ಅವೈಜ್ಞಾನಿಕ ವಿವರದೊಂದಿಗೆ ತಿರಸ್ಕಾರ ಮಾಡಿದ್ದರು ಎನ್ನುವುದು ತಿಳಿಯುತ್ತಿಲ್ಲ.
ನಿಜವಾಗಿಯೂ ಕಳೆದ 15 ವರ್ಷದಿಂದ ಆ ಸಮುದಾಯದ ಜನರಲ್ಲಿ ಹಲವಾರು ಸಂಘಟನೆಗಳ ಪ್ರಯತ್ನದಿಂದ ಹಾಗೂ ಮಕ್ಕಳು ವಿದ್ಯೆ ಕಲಿತ ಕಾರಣ ಕುಟುಂಬದ ಹಿರಿಯರು ದುಶ್ಚಟಗಳಿಂದ ದೂರವಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಉಚಿತ ಚಿಕಿತ್ಸಾ ವ್ಯವಸ್ಥೆಯನ್ನು ಹಿಂತೆಗೆದುಕೊಂಡರೆ ಆ ಸಮುದಾಯಕ್ಕೆ ತೀರಾ ಹಾನಿಯಾಗು ತ್ತದೆ. ಆದ್ದರಿಂದ ಆದೇಶವನ್ನು ವಾಪಾಸು ಪಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.







