ಡಿವೈಎಫ್‌ಐ ಕಣ್ಣೂರು ಘಟಕದ ಸಭೆ

ಮಂಗಳೂರು, ಸೆ.5: ಜಿಲ್ಲೆಯ ಯುವಜನತೆ ಧರ್ಮ ರಕ್ಷಣೆಯ ಹೆಸರಲ್ಲಿ ಪರಸ್ಪರ ಹೊಡೆದಾಡಿ ಬೀದಿ ಹೆಣವಾಗಿ ಸಾಯುವುದಕ್ಕಿಂತ ಉದ್ಯೋಗದ ಹಕ್ಕಿಗಾಗಿ ಹೋರಾಡಬೇಕು. ಜನರ ನೈಜ ಬದುಕಿನ ಪ್ರಶ್ನೆಯ ಇತ್ಯರ್ಥಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
‘ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನತೆಗೆ ದೊಡ್ಡ ಪಾಲು, ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ’ ಎಂಬ ಘೋಷಣೆಯಡಿ ರವಿವಾರ ಕಣ್ಣೂರು ಗಾಣದಬೆಟ್ಟಿನಲ್ಲಿ ನಡೆದ ಡಿವೈಎಫ್‌ಐ ಕಣ್ಣೂರು ಘಟಕದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಚುನಾವಣಾ ಪೂರ್ವ ಭರವಸೆ ನೀಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈವರೆಗೆ ಯಾವ ಉದ್ಯೋಗವನ್ನೂ ಸೃಷ್ಟಿಸಲಿಲ್ಲ. ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಾರ್ಪೊರೆಟ್ ಕಂಪೆನಿಗಳಿಗೆ ಮಾರಾಟ ಮಾಡಿ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಮೂಲಕ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಸಂತೋಷ್ ಬಜಾಲ್ ಹೇಳಿದರು.
ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ ಮಾತನಾಡಿದರು. ಖಾದರ್ ಬೋರುಗುಡ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ರಚಿಸಲಾದ ನೂತನ ಸಮಿತಿಯ ಅಧ್ಯಕ್ಷರಾಗಿ ಸಾದಿಕ್ ಕಣ್ಣೂರು, ಕಾರ್ಯದರ್ಶಿಯಾಗಿ ಹಾರಿಸ್ ಕುಂಡಾಲ ಆಯ್ಕೆಯಾದರು.







