ಸೆ.6ರಂದು ಕಲ್ಲಾಪುವಿನಿಂದ ಮುಡಿಪುವರೆಗೆ ತಿರಂಗಯಾತ್ರೆ: ಯು.ಟಿ ಖಾದರ್

ಉಳ್ಳಾಲ: ಸ್ವಾತಂತ್ಯ ಅಮೃತ ಮಹೋತ್ಸವ ಪ್ರಯುಕ್ತ ಸೆ.6ರಂದು ಕಲ್ಲಾಪುವಿನಿಂದ ಮುಡಿಪುವಿನ ತನಕ ಕಾಂಗ್ರೆಸ್ ಪಕ್ಷದ ವತಿಯಿಂದ ಐಕ್ಯತಾ ತಿರಂಗಾ ಯಾತ್ರೆ ನಡೆಯಲಿದ್ದು, ಜನರು ಹಾಕುವ ಒಂದೊಂದು ಹೆಜ್ಜೆನೂ ನೋವಿನಿಂದ ಕೂಡಿರುತ್ತದೆ ಎಂದು ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು.
ಸೋಮವಾರ ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರುಷಗಳಾದರೂ ಜನರು ಅದನ್ನ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಎಲ್ಲ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಶಿಕ್ಷಣ ವ್ಯಾಪಾರೀಕರಣದಿಂದ ಮಕ್ಕಳಿಗೆ ಇಂದು ಪೋಷಕರು ವಿದ್ಯೆ ನೀಡಲು ಪರದಾಡುವಂತಾ ಗಿದೆ. ನಿರುದ್ಯೋಗದಿಂದ ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ.
ಆ ನಿಟ್ಟಿನಲ್ಲಿ ನಾಳೆ ಮಧ್ಯಾಹ್ನ 12:30ಕ್ಕೆ ಕಲ್ಲಾಪುವಿನಲ್ಲಿ ಕಾರ್ಯಕ್ರಮ ನಡೆಯಲಿದ್ದು ಬಳಿಕ ನಡೆಯುವ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಇಂದು ಸಮಾಜದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರ ಸ್ಥಿತಿ ಚಿಂತಾಜನಕ ಆಗುತ್ತಿದೆ. ಅಬ್ಬಕ್ಕಳ ನಾಡಿನಲ್ಲಿ ಧರ್ಮಗಳ ನಡುವೆ ವೈಷಮ್ಯ ಇಲ್ಲ ಎನ್ನುವ ಸಂದೇಶ ಪಾದಯಾತ್ರೆಯ ಮೂಲಕ ರವಾನೆಯಾಗಲಿದೆ. ಈ ಯಾತ್ರೆ ಯುವಜನರ ಭವಿಷ್ಯದ ದೃಷ್ಟಿಯಿಂದ ನಡೆಯಲಿದೆ. ಮುಡಿಪುವಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಲಿಖಿತ್ ಮೌರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಸದಸ್ಯ ಸುರೇಶ್ ಭಟ್ನಗರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ, ಈಶ್ವರ್ ಉಳ್ಳಾಲ‌್, ಬಾಜಿಲ್ ಡಿಸೋಜ, ದಿನೇಶ್ ರೈ, ದೇವಕಿ ಉಳ್ಳಾಲ‌್, ನಝರ್ ಷಾ ಪಟ್ಟೋರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.