ಗುಜರಾತ್ ಮಾದಕ ದ್ರವ್ಯಗಳ ಕೇಂದ್ರವಾಗಿದೆ: ಬಿಜೆಪಿ ಸರಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಅಹ್ಮದಾಬಾದ್,ಸೆ.5: ರಾಜ್ಯದಲ್ಲಿಯ ಬಿಜೆಪಿ ಸರಕಾರದ ವಿರುದ್ಧ ಸೋಮವಾರ ಇಲ್ಲಿ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಗುಜರಾತ್ ಮಾದಕ ದ್ರವ್ಯಗಳ ಕೇಂದ್ರವಾಗಿದೆ ಎಂದು ಹೇಳಿದರು.
ಗುಜರಾತ್ ಮಾದಕ ದ್ರವ್ಯಗಳ ಕೇಂದ್ರವಾಗಿದೆ. ಎಲ್ಲ ಮಾದಕ ದ್ರವ್ಯಗಳನ್ನು ರಾಜ್ಯದ ಮುಂದ್ರಾ ಬಂದರಿನಿಂದ ಸಾಗಿಸಲಾಗಿದೆ,ಆದರೆ ನಿಮ್ಮ ಸರಕಾರವು ಕ್ರಮ ಕೈಗೊಳ್ಳುತ್ತಿಲ್ಲ. ಇದು ಗುಜರಾತ್ ಮಾದರಿಯಾಗಿದೆ. ಗುಜರಾತ ಪ್ರತಿಭಣನೆ ನಡೆಸುವ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗಿರುವ ರಾಜ್ಯವಾಗಿದೆ,ಯಾರ ವಿರುದ್ಧ ಪ್ರತಿಭಟನೆ ನಡೆಯಲಿದೆಯೋ ಅವರಿಂದಲೇ ಅನುಮತಿಯನ್ನು ಪಡೆಯಬೇಕಿದೆ ಎಂದು ಅವರು ಹೇಳಿದರು.
ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೂರು ಲ.ರೂ.ಗಳವರೆಗಿನ ರೈತರ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ ರಾಹುಲ್,ಸರ್ದಾರ್ ಪಟೇಲರು ರೈತರ ಧ್ವನಿಯಾಗಿದ್ದರು. ಬಿಜೆಪಿ ಒಂದೆಡೆ ಅವರ ಅತ್ಯಂತ ಎತ್ತರದ ಪ್ರತಿಮೆಯನ್ನು ನಿರ್ಮಿಸುತ್ತದೆ ಮತ್ತು ಇನ್ನೊಂದೆಡೆ ಅವರು ಯಾರಿಗಾಗಿ ಹೋರಾಡಿದ್ದರೋ ಅಂತಹ ಜನರ ವಿರುದ್ಧ ಕೆಲಸ ಮಾಡುತ್ತದೆ ಎಂದು ಟೀಕಿಸಿದರು.





