ಮಂಗಳೂರು: ಮಹಿಳೆಯ ಚಿನ್ನಾಭರಣ ದೋಚಿದ ಅಪರಿಚಿತ; ದೂರು ದಾಖಲು

ಸಾಂದರ್ಭಿಕ ಚಿತ್ರ
ಮಂಗಳೂರು, ಸೆ.5: ನಗರದ ಜೈನ್ ಟೆಂಪಲ್ ಹಿಂಬದಿಯ ಟಿ.ಟಿ. ರಸ್ತೆಯಲ್ಲಿರುವ ಮನೆಯೊಳಗೆ ಅಪರಿಚಿತನೊಬ್ಬ ನುಗ್ಗಿ ಮಹಿಳೆಯ ಚಿನ್ನಾಭರಣವನ್ನು ದೋಚಿದ ಘಟನೆ ಸೋಮವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಮಹಿಳೆ ತನ್ನ ಮನೆಯಲ್ಲಿದ್ದಾಗ ಬೆಳಗ್ಗೆ ಸುಮಾರು 9.15ಕ್ಕೆ ಮನೆಯೊಳಗೆ ಪ್ರವೇಶಿಸಿದ ಅಪರಿಚಿತ 2000 ರೂ. ತೋರಿಸಿ ಚಿಲ್ಲರೆ ನೀಡುವಂತೆ ಕೇಳಿದ. ಬಳಿಕ ‘ನೀವು ಚಿನ್ನವನ್ನು ಎಲ್ಲಿ ಇಡುತ್ತೀರಿ?’ ಎಂದು ತನ್ನಲ್ಲಿ ವಿಚಾರಿಸಿದ. ಆವಾಗ ತಾನು ಕಪಾಟಿನಲ್ಲಿ ಚಿನ್ನವನ್ನಿಟ್ಟಿದ್ದ ಹ್ಯಾಂಡ್ಬ್ಯಾಗ್ ತೋರಿಸಿದೆ. ಅಪರಿಚಿತ ವ್ಯಕ್ತಿಯು ಆ ಬ್ಯಾಗ್ ನೋಡಿ ಕೊಡುವುದಾಗಿ ಹೇಳಿ ಪಡೆದುಕೊಂಡನಲ್ಲದೆ ಬಳಿಕ ಅಲ್ಲಿಂದ ಪರಾರಿಯಾದ ಎಂದು ಮಹಿಳೆಯು ಬಂದರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹ್ಯಾಂಡ್ ಬ್ಯಾಗ್ನಲ್ಲಿ 1 ಮಂಗಳಸೂತ್ರದ ಸರ, 1 ದೊಡ್ಡ ಉಂಗುರ, 5 ಚಿಕ್ಕ ಉಂಗುರ ಸಹಿತ 130 ಗ್ರಾಂ ಚಿನ್ನವಿತ್ತು. ಅಪರಿಚಿತ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿದ್ದ. ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ಘಟನೆ ನಡೆದ ಕೆಲವು ನಿಮಿಷದ ಬಳಿಕ ತಾನು ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದೆ ಎಂದು ಮಹಿಳೆ ತಿಳಿಸಿದ್ದಾರೆ.
ಈ ಬಗ್ಗೆ ಬಂದರು ಪೊಲೀಸರು ದೂರು ದಾಖಲಿಸಿದ್ದಾರೆ.





