ಜಾಗತಿಕ ಮಾರುಕಟ್ಟೆಗಾಗಿ ಮರುಬಳಸಬಹುದಾದ ರಾಕೆಟ್‌ಗಳನ್ನು ಭಾರತವು ನಿರ್ಮಿಸಲಿದೆ:ಇಸ್ರೋ

ಬೆಂಗಳೂರು,ಸೆ.5: ಭಾರತವು ಜಾಗತಿಕ ಮಾರುಕಟ್ಟೆಗಾಗಿ ಉಪಗ್ರಹ ಉಡಾವಣೆ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಬಲ್ಲ ಹೊಸ ಮರುಬಳಕೆ ಮಾಡಬಹುದಾದ ರಾಕೆಟ್‌ನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಯೋಜನೆಗಳನ್ನು ಹೊಂದಿದೆ ಎಂದು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರು ಸೋಮವಾರ ಇಲ್ಲಿ ತಿಳಿಸಿದರು. ‘ಉಡಾವಣೆ ವೆಚ್ಚಗಳು ಇಂದಿಗಿಂತ ತುಂಬ ಅಗ್ಗವಾಗಿರಬೇಕು ಎಂದು ನಾವೆಲ್ಲರೂ ಬಯಸುತ್ತಿದ್ದೇವೆ ’ಎಂದರು.
ಏಳನೇ ‘ಬೆಂಗಳೂರು ಸ್ಪೇಸ್ ಎಕ್ಸ್‌ಪೋ 2022’ನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮತ್ತು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸೋಮನಾಥ,ಪ್ರಸಕ್ತ ಒಂದು ಕೆ.ಜಿ.ಪೇಲೋಡ್‌ನ್ನು ಕಕ್ಷೆಯಲ್ಲಿರಿಸಲು ಸುಮಾರು 10,000ದಿಂದ 15,000 ಅಮೆರಿಕನ್ ಡಾಲರ್‌ಗಳ ವೆಚ್ಚ ತಗಲುತ್ತದೆ. ನಾವದನ್ನು ಪ್ರತಿ ಕೆ.ಜಿ.ಗೆ 5,000 ಡಾ. ಅಥವಾ 1,000 ಡಾ.ಗೂ ತಗ್ಗಿಸಬೇಕಿದೆ. ರಾಕೆಟ್ ಮರುಬಳಕೆಯಾಗುವಂತೆ ಮಾಡುವುದು ಅದಕ್ಕೆ ಏಕೈಕ ಮಾರ್ಗವಾಗಿದೆ. ಇಂದು ಭಾರತದಲ್ಲಿ ನಾವು ಮರುಬಳಸಬಹುದಾದ ತಂತ್ರಜ್ಞಾನವನ್ನು ಉಡಾವಣಾ ವಾಹನ (ರಾಕೆಟ್‌ಗಳು)ಗಳಲ್ಲಿ ಹೊಂದಿಲ್ಲ ಎಂದು ಹೇಳಿದರು.
‘ಆದ್ದರಿಂದ ಜಿಎಸ್‌ಎಲ್‌ವಿ ಮಾರ್ಕ್ III ರ ನಂತರ ನಾವು ನಿರ್ಮಿಸುವ ಮುಂದಿನ ರಾಕೆಟ್ ಮರುಬಳಕೆಯ ರಾಕೆಟ್ ಆಗಿರಬೇಕು ಎನ್ನುವುದು ನಮ್ಮ ವಿಚಾರವಾಗಿದೆ’ ಎಂದರು.





