ಉಳ್ಳಾಲ ತಾಲೂಕು ಮಟ್ಟದ ಶಿಕ್ಷಕರ ಭವನ ಶೀಘ್ರ ನಿರ್ಮಾಣ: ಯು.ಟಿ.ಖಾದರ್

ಮಂಗಳೂರು: ವ್ಯಕ್ತಿಯ ಉನ್ನತಿ, ವ್ಯಕ್ತಿತ್ವ ಬೆಳವಣಿಗೆಯ ಹಿಂದೆ ಶಿಕ್ಷಕರ ಪರಿಶ್ರಮ ಇದ್ದು, ದೇಶದ ಉನ್ನತಿಯಲ್ಲೂ ಶಿಕ್ಷಕರ ಶ್ರಮ ಇದೆ. ಶಿಕ್ಷಕರಿಗಾಗಿಯೇ ಪ್ರತ್ಯೇಕ ಭವನ ಬೇಕಿದ್ದು ಆ ನಿಟ್ಟಿನಲ್ಲಿ ಉಳ್ಳಾಲ ತಾಲೂಕಿನಲ್ಲಿ ಅತ್ಯುತ್ತಮ ಶಿಕ್ಷಕರ ಭವನ ಶೀಘ್ರ ನಿರ್ಮಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲಾ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಯಾ ಧರ್ಮಕ್ಕೆ ಪ್ರತ್ಯೇಕ ಧರ್ಮಗ್ರಂಥ ಇದ್ದರೆ ದೇಶಕ್ಕೆ ಸಂವಿಧಾನವೇ ಧರ್ಮಗ್ರಂಥ. ಇಂದಿನ ಯುವಪೀಳಿಗೆಯಲ್ಲಿ ಸೇವಾ ಮನೋಭಾವ, ತಾಳ್ಮೆಯ ಕೊರತೆಯಿದ್ದು ಇದನ್ನು ತಿದ್ದುವ ಕಾರ್ಯ ಶಿಕ್ಷಕರಿಂದ ನಡೆಯಬೇಕು. ದೇಶಕ್ಕೆ ಅತ್ಯುತ್ತಮ ಪ್ರಜೆಗಳ ಅಗತ್ಯವಿದ್ದು ಅಂಥ ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು ಅದರಲ್ಲೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಧಕ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಅವರು ಬೇಡಿಕೆಗಳ ಮನವಿ ಜನಪ್ರತಿನಿಧಿಗಳಿಗೆ ಸಲ್ಲಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಅನಂತಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮನಪಾ ಸದಸ್ಯೆ ವೀಣಾ ಮಂಗಳ, ಕೇಟರರ್ಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜ್ ಗೋಪಾಲ್ ರೈ, ರೋಟರಿ ಕ್ಲಬ್ ಮಂಗಳೂರು ಕೇಂದ್ರೀಯ ಅಧ್ಯಕ್ಷ ಸಾಯಿಬಾಬ, ಕ್ಷೇತ್ರ ಶಿಕ್ಷಣ ನಿವೃತ್ತ ಅಧಿಕಾರಿ ರಮಾಶೇಷ ಶೆಟ್ಟಿ, ನಿವೃತ್ತ ಶಿಕ್ಷಕ ಡಾ.ಇಸ್ಮಾಯಿಲ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕಿ ಪೂರ್ಣಿಮಾ ರೈ, ರವಿಶಂಕರ್, ಅಕ್ಷರ ದಾಸೋಹ ಅಧಿಕಾರಿ ಉಷಲತಾ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ತಾಲೂಕು ಅಧ್ಯಕ್ಷ ಎಂ.ಎಚ್. ಮಲಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ತ್ಯಾಗಂ ಹರೇಕಳ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜಯವಂತಿ ಸೋನ್ಸ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷೆ ಪ್ರಮೀಳಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಸ್ವಾಗತಿಸಿದರು. ಮೋಹನ್ ಶಿರ್ಲಾಲ್ ಮತ್ತು ಗೀತಾ ಡಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.