ಕಾರ್ಕಳ ; ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮ

ಕಾರ್ಕಳ : ಯೂತ್ ಬಿಲ್ಲವ ಕಾರ್ಕಳ ನೇತೃತ್ವದಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಸಮಸ್ತ ಬಿಲ್ಲವ ಸಂಘಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಬಿರ್ವೆರೆ ಕೆಸರ್ದ ಗೊಬ್ಬು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ರವಿವಾರ ನಡೆಯಿತು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೆಸರ್ದ ಗೊಬ್ಬು ಕ್ರೀಡಾಕೂಟದ ಮೂಲಕ ಮನೋರಂಜನೆ ಜೊತೆಗೆ ಯುವ ಸಮುದಾಯದಲ್ಲಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯವಾಗುತ್ತಿದೆ. ಯೂತ್ ಬಿಲ್ಲವ ಸಂಘಟನಾತ್ಮಕವಾಗಿ ಇಂತಹ ಕ್ರೀಡಕೂಟ ಆಯೋಜಿಸಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಕಾರ್ಯ ಮತ್ತಷ್ಟು ವಿಸ್ತರಿಸುವಂತಾಗಲಿ ಎಂದವರು ಆಶಯ ವ್ಯಕ್ತಪಡಿಸಿದರು.
ಯೂತ್ ಬಿಲ್ಲವ ವತಿಯಿಂದ ಅದ್ಧೂರಿಯಾಗಿ ಕೆಸರ್ದ ಗೊಬ್ಬು ಆಯೋಜಿಸಿರುವುದನ್ನು ಕಂಡು ಮನಸ್ಸು ತುಂಬಿ ಬಂದಿದೆ. ಸಮಾಜ ಬಾಂಧವರು ಒಗ್ಗಟ್ಟಿನ ಮೂಲಕ ಉನ್ನತ ಸ್ಥಾನ ಅಲಂಕರಿಸುವಂತಾಗಬೇಕು. ನನ್ನ ಬದುಕಿನಲ್ಲಿ ಸಮಸ್ಯೆಯೊಂದು ಎದುರಾದಾಗ ಬೆನ್ನಿಗೆ ನಿಂತಿರುವುದು ಬಿಲ್ಲವ ಸಮಾಜ. ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಹಾಸ್ಯ ಕಲಾವಿದ ಅರವಿಂದ ಬೋಳಾರ್ ಹೇಳಿದರು.
ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್, ವೈದ್ಯ, ಇಂಜಿನೀಯರಿಂಗ್ ಕ್ಷೇತ್ರದಲ್ಲಿರಬೇಕೆಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು ನೀರು ಹಾಗೂ ಹಾಲು ಗದ್ದೆಗೆ ಅರ್ಪಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಮೂಜೂರು ಹಾಡಿಯ ಗರಡಿ ಪೂಜಾರಿ ಲೋಕು ಪೂಜಾರಿ, ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಮೊಕ್ತೇಸರ, ಯೂತ್ ಬಿಲ್ಲ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ಕೃಷ್ಣ ಗ್ರೂಪ್ಸ್ ಬೆಳ್ಮಣ್ ಮಾಲಕ ಎಸ್. ಕೆ. ಸಾಲ್ಯಾನ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕರ್ನಾಟಕ ಮೀನುಗಾರಿಕ ಅಭಿವೃದ್ದಿ ನಿಗಮದ ನಿರ್ದೇಶಕಿ ಗೀತಾಂಜಲಿ ಸುವರ್ಣ, ಆರ್ಕಿಟೆಕ್ಟ್ ಮತ್ತು ವಾಸ್ತುತಜ್ಞ ಪ್ರಮಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೂತ್ ಬಿಲ್ಲವ ಸಂಘದ ಅಧ್ಯಕ್ಷ ಭರತ್ ಸಿ. ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಿಸ್ತುಬದ್ಧ ಸಂಘಟನೆ ಮೂಲಕ ಮಾದರಿಯಾಗಿ ಗುರುತಿಸಿಕೊಂಡಿರುವ ಯೂತ್ ಬಿಲ್ಲವ ಸಂಘ ಕಾರ್ಯ ಅಭಿನಂದನೀಯ. ಸಂಘಟನೆಯ ಬಲ ಸಮಾಜದ ಪರಿವರ್ತನೆಗೆ ನೆರವಾಗಲಿ ಎಂದರು. ಮೂಲ್ಕಿ - ಮೂಡುಬಿದಿರೆ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್ ಉಪಸ್ಥಿತರಿದ್ದರು.