ಭಾರತ್ ಜೋಡೋ ಪಾದಯಾತ್ರೆ ಐತಿಹಾಸಿಕ ನಡಿಗೆಯಾಗಬೇಕು: ಸಿದ್ದರಾಮಯ್ಯ
ಕಾಂಗ್ರೆಸ್ ಮುಖಂಡರೊಂದಿಗೆ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆ

ಮೈಸೂರು,ಸೆ.5: ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿಯವರು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆಸುವ ಭಾರತ್ ಜೋಡೋ ಪಾದಯಾತ್ರೆ ಐತಿಹಾಸಿಕ ನಡಿಗೆಯಾಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚಿಸಲು ಇಂದು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಉಭಯ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಕಳೆದ ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುವ ಅಭ್ಯರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ನಾನೂ ಭಾಗವಹಿಸಲಿದ್ದೇನೆ. ದೇಶಾದ್ಯಂತ 3570 ಕಿ.ಮೀ. ಪಾದಯಾತ್ರೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 510 ಕಿ.ಮೀ. ಯಾತ್ರೆ ಸಾಗಲಿದೆ ಎಂದು ವಿವರಿಸಿದರು.
ಸೆ.30ರಂದು ಗುಂಡ್ಲುಪೇಟೆ ಮೂಲಕ ಪಾದಯಾತ್ರೆ ರಾಜ್ಯ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಅದ್ದೂರಿ ಸ್ವಾಗತ ಕೋರಲು ನಿರ್ಧರಿಸಿದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಪಾದಯಾತ್ರೆ ಯಶಸ್ವಿಗೊಳಿಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಉಭಯ ಜಿಲ್ಲೆಯಲ್ಲಿ ನಡೆಯುವ ಪಾದಯಾತ್ರೆ ನೆನಪಿನಲ್ಲಿ ಉಳಿಯುವಂತಿರಬೇಕು. ಇದರ ಜವಾಬ್ದಾರಿಯನ್ನು ಎರಡೂ ಜಿಲ್ಲೆಯ ಮುಖಂಡರು ವಹಿಸಿಕೊಳ್ಳಬೇಕು ಎಂದರು.

ಯಾವುದೇ ರಾಜಕೀಯ ಪಕ್ಷಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರಬೇಕು. ಮತ್ತೊಂದು ಪಕ್ಷದ ವಿನಾಶಕ್ಕೆ ಮುಂದಾಗಬಾರದು. ಬೇರೆ ಬೇರೆ ಪಕ್ಷಗಳು ಈ ವ್ಯವಸ್ಥೆಯಲ್ಲಿ ಇರಬೇಕು ಎಂಬ ಮನೋಭಾವ ಹೊಂದಿರಬೇಕು. ಆದರೆ ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಿದರು.
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಬೆಲೆ ಎರಿಕೆ ನಿಯಂತ್ರಣ, ದೇಶದಲ್ಲಿ ಶಾಂತಿ, ಸಾಮರಸ್ಯದ ವಾತಾವರಣ ನಿರ್ಮಾಣ, ದೇಶದ ಜನರ ಹಸಿವು ನೀಗಿಸುವ ಅನ್ನದಾತರ ಬದುಕು ಭದ್ರಪಡಿಸುವ ಉದ್ದೇಶದಿಂದ ಈ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರನ್ನು ಹಮ್ಮಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅವರು ಮಾತನಾಡಿ, ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ನಾನಾ ವರ್ಗದವರೊಂದಿಗೆ ಸಂವಾದ ನಡೆಸಲಿದ್ದಾರೆ. ಪಾದಯಾತ್ರೆಯನ್ನು ಅರ್ಥಪೂರ್ಣಗೊಳಿಸುವುದು ಇದರ ಉದ್ದೇಶ ಎಂದರು.
ರಾಜ್ಯ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಪಕ್ಷದ ಮೈಸೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಡಾ. ವಿಜಯಕುಮಾರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಮೈಸೂರು ನಗರ ಘಟಕ ಅಧ್ಯಕ್ಷ ಮೂರ್ತಿ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ನರೇಂದ್ರ, ಮಂಜುನಾಥ್, ಪುಟ್ಟರಂಗ ಶೆಟ್ಟಿ, ತನ್ವೀರ್ ಸೇಠ್, ಡಾ. ತಿಮ್ಮಯ್ಯ, ಮಧು ಮಾದೇಗೌಡ ಹಾಜರಿದ್ದರು.







