ಕಾಬೂಲ್‌ನಲ್ಲಿ ಬಾಂಬ್ ಸ್ಫೋಟ: ರಶ್ಯನ್ ರಾಜತಾಂತ್ರಿಕರ ಸಹಿತ ಹಲವರ ಮೃತ್ಯು

ಕಾಬೂಲ್, ಸೆ.೫: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಶ್ಯಾ ರಾಯಭಾರ ಕಚೇರಿಯ ಹೊರಭಾಗದಲ್ಲಿ ಸೋಮವಾರ ಸಂಭವಿಸಿದ ಶಕ್ತಿಶಾಲಿ ಸ್ಫೋಟದಲ್ಲಿ ರಶ್ಯದ ಇಬ್ಬರು ರಾಜತಾಂತ್ರಿಕರ ಸಹಿತ ಹಲವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ರಾಯಭಾರ ಕಚೇರಿಯ ಇಬ್ಬರು ಸಿಬಂದಿಗಳು ಹಾಗೂ ಸ್ಥಳೀಯರು ಮೃತಪಟ್ಟಿರುವುದಾಗಿ ರಶ್ಯದ ವಿದೇಶಾಂಗ ಇಲಾಖೆ ಹೇಳಿದೆ. ಕಾಬೂಲ್‌ನ ದರುಲಾಮನ್ ರಸ್ತೆಯಲ್ಲಿರುವ ರಶ್ಯ ರಾಯಭಾರ ಕಚೇರಿಯ ಬಳಿ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳನ್ನು ಎಸೆದಿದ್ದಾನೆ. ಆತನನ್ನು ಕಚೇರಿಯ ಸಶಸ್ತç ಭದ್ರತಾ ಸಿಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಫ್ಘಾನ್ ಪೊಲೀಸರು ಇದಕ್ಕೂ ಮುನ್ನ ಹೇಳಿದ್ದರು.
ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ತಾಲಿಬಾನ್‌ನ ಸಹಾಯಕ ವಕ್ತಾರ ಬಿಲಾಲ್ ಕರೀಮಿ ಹೇಳಿದ್ದಾರೆ. ತಾಲಿಬಾನ್ ಪಡೆ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಬಹುತೇಕ ದೇಶಗಳು ತಮ್ಮ ರಾಯಭಾರ ಕಚೇರಿಯನ್ನು ಮುಚ್ಚಿದ್ದರೆ ರಶ್ಯ ಸೇರಿದಂತೆ ಕೆಲ ದೇಶಗಳ ಕಚೇರಿ ಈಗಲೂ ಕಾರ್ಯಾಚರಿಸುತ್ತಿದೆ. ತಾಲಿಬಾನ್ ಸರಕಾರಕ್ಕೆ ರಶ್ಯಾ ಅಧಿಕೃತವಾಗಿ ಮಾನ್ಯತೆ ನೀಡದಿದ್ದರೂ, ಅಫ್ಘಾನ್‌ಗೆ ಗ್ಯಾಸೊಲಿನ್ ಮತ್ತಿತರ ಸರಕುಗಳನ್ನು ಪೂರೈಸುವ ಕುರಿತ ಮಾತುಕತೆಗೆ ಈ ಕಚೇರಿಯನ್ನು ಬಳಸಿಕೊಳ್ಳುತ್ತಿದೆ.







