ಮಂಗಳೂರು; ಎರಡು ಪ್ರತ್ಯೇಕ ಪ್ರಕರಣದಲ್ಲಿ ಚಿನ್ನ ಅಕ್ರಮ ಸಾಗಾಟ ಪತ್ತೆ

ಮಂಗಳೂರು, ಸೆ.6: ಕಸ್ಟಮ್ಸ್ ಅಧಿಕಾರಿಗಳು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 55,39,810 ರೂ. ಮೌಲ್ಯದ 1087.250 ಗ್ರಾಂ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ.
ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಕಾಸರಗೋಡು ಮೂಲದ ಪ್ರಯಾಣಿಕನ ಬಳಿ 9,74,080 ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಅಂಟು ಬಳಸಿದ ಚಿನ್ನದ ಪೌಡರನ್ನು ಕಾಗದಕ್ಕೆ ಅಂಟಿಸಿ ಕಾರ್ಬನ್ ಶೀಟ್‌ನಲ್ಲಿ ಕಟ್ಟಿ ಬಾಕ್ಸ್‌ನೊಳಗಿಟ್ಟು ಸಾಗಾಟ ಮಾಡಿದ್ದನ್ನು ಪತ್ತೆ ಹಚ್ಚಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೂವರು ಪ್ರಯಾಣಿಕರಿಂದ 897 ಗ್ರಾಂ ತೂಕದ 45,65,730 ರೂ, ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಚಪ್ಪಲಿಯೊಳಗಿಟ್ಟು ಚಿನ್ನವನ್ನು ಸಾಗಾಟ ಮಾಡಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story