ರೌಡಿ ಪಿಟ್ಟಿ ನಾಗೇಶ್ ಕೊಲೆ ಪ್ರಕರಣ: ಐವರು ಆರೋಪಿಗಳು ಖುಲಾಸೆ

ರೌಡಿ ಪಿಟ್ಟಿ ನಾಗೇಶ್
ಉಡುಪಿ, ಸೆ.6: ಎಂಟು ವರ್ಷಗಳ ಹಿಂದೆ ನಡೆದ ರೌಡಿ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಐವರು ಆರೋಪಿ ಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ ಇಂದು ಆದೇಶ ನೀಡಿದೆ.
ಸಂತೆಕಟ್ಟೆ ಪ್ರಗತಿನಗರದ ಐವನ್ ರಿಚರ್ಡ್ ಯಾನೆ ಮುನ್ನ (41), ಅಲೆವೂರು ಗುಡ್ಡೆಯಂಗಡಿಯ ಗುರುಪ್ರಸಾದ್ ಶೆಟ್ಟಿ(34), ಬೈಲೂರು ಹನುಮಾನ್ ಗ್ಯಾರೇಜ್ ಬಳಿಯ ಸಂತೋಷ ಪೂಜಾರಿ(40), ಕೊರಂಗ್ರ ಪಾಡಿಯ ವಿಶ್ವನಾಥ ಶೆಟ್ಟಿ(40), ಕುಕ್ಕಿಕಟ್ಟೆ ಕಲ್ಯಾಣ ನಗರದ ಜಾಕೀರ್ ಹುಸೈನ್(33) ಖುಲಾಸೆಗೊಂಡ ಆರೋಪಿಗಳು.
2011ರ ಜ.14ರಂದು ಹಿರಿಯಡ್ಕ ಜೈಲಿನಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್ನ ಕೊಲೆಗೆ ಪ್ರತೀಕಾರವಾಗಿ ಆತನ ಸಹಚರರು ಸೇರಿ ೨೦೧೪ರ ಸೆ.೧೧ರಂದು ಉದ್ಯಾವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಟೋಯೋಟಾ ಶೋರೂಮ್ನ ಎದುರು ಪಿಟ್ಟಿ ನಾಗೇಶ್ನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸೆ.೧೨ರಂದು ಆರೋಪಿಗಳನ್ನು ಬಂಧಿಸಿದ್ದರು.
ತನಿಖೆ ನಡೆಸಿದ ಆಗಿನ ವೃತ್ತ ನಿರೀಕ್ಷಕ ಸುನೀಲ್ ವೈ.ನಾಯಕ್ ದೋಷಾ ರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದರು. ಐವರು ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ ವಾದಿಸಿದ್ದರು.
ಉಡುಪಿ ನಗರದ ಕುಕ್ಕಿಕಟ್ಟೆಯ ಇಂದಿರಾ ನಗರ ನಿವಾಸಿ ನಾಗೇಶ್ ದೇವಾಡಿಗ ಯಾನೆ ಪಿಟ್ಟಿ ನಾಗೇಶ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ನಾಲ್ಕು ಕೊಲೆ ಪ್ರಕರಣಗಳು ಸೇರಿದಂತೆ ಒಟ್ಟು ೨೨ ಕೇಸುಗಳು ದಾಖಲಾಗಿತ್ತು.







