ಹಳೆಕೋಟೆ ಸೈಯದ್ ಮದನಿ ಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ

ಮಂಗಳೂರು, ಸೆ.6: ಅಕ್ಷರ ಕಲಿಸಿಕೊಟ್ಟವರ ದಾಸರಾಗಿರಬೇಕು ಎನ್ನುವ ವಚನ ಕುರ್‌ಆನಿನಲ್ಲಿದೆ. ಅಷ್ಟೊಂದು ಪವಿತ್ರ ಹುದ್ದೆಯಲ್ಲಿರುವ ಶಿಕ್ಷಕರು ವೇತನ, ಒತ್ತಡಕ್ಕೆ ಬಲಿಯಾಗದೆ ಮಕ್ಕಳ ಉನ್ನತಿಗಾಗಿ ಶ್ರಮಿಸಬೇಕು ಎಂದು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಶಿಕ್ಷಕರ ದಿನ ಪ್ರಯುಕ್ತ ಟ್ರಸ್ಟ್ ಅಧೀನದಲ್ಲಿರುವ ಹಳೆಕೋಟೆ ಸೈಯದ್ ಮದನಿ ಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು.
ಹಿಂದೆ ಶಿಕ್ಷಣ ಸಂಸ್ಥೆಯಲ್ಲಿ ಜಾತಿ, ಧರ್ಮದ ಹಂಗಿರಲಿಲ್ಲ. ಈಗ ಧರ್ಮಾಧಾರಿತ ನೆಲೆಯಲ್ಲಿ ಶಾಲೆಗಳು ಆರಂಭಗೊಂಡಿರುವುದು ದುರಂತ. ಶಾಲೆಗಳನ್ನು ತೆರೆಯುತ್ತಾ ಹೋಗುವ ಸರಕಾರ ಹಾಲಿಯಿರುವ ಶಾಲೆಗಳತ್ತ ಗಮನಹರಿಸದ ಕಾರಣ ಇಂದು ಕನ್ನಡ ಶಾಲೆಗಳಲ್ಲಿ ಸಮಸ್ಯೆ ಎದುರಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಮಾತನಾಡಿದರು. ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಎಸ್., ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಶಾಲಾ ಮುಖಶಿಕ್ಷಕ ಕೆಎಂಕೆ ಮಂಜನಾಡಿ, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಉದ್ಯಮಿ ಝೈನುದ್ದೀನ್, ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಕಕ್ಕೆತೋಟ, ನಿವೃತ್ತ ಸ್ಕೌಟ್ ಶಿಕ್ಷಕ ಬಿ.ಎಂ.ತುಂಬೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸ್ಟ್ಯಾನಿ ತಾವ್ರೊ, ಹಿರಿಯರಾದ ಯು.ಕೆ.ಬಾವ, ಕೋಶಾಧಿಕಾರಿ ಕರೀಂ ಯು.ಎಚ್., ಎಂ. ಎಚ್. ಇಬ್ರಾಹಿಂ, ಬಿಆರ್‌ಪಿ ತಹ್ಸೀನಾ, ಸಿಆರ್‌ಪಿಗಳಾದ ಗೀತಾ ಶೆಟ್ಟಿ, ಗೀತಾ ಸಲ್ದಾನ, ರೆಹನಾ, ಸವಿತಾ, ಮೋಹನ್, ಭಾರತ ಸ್ಕೌಟ್ಸ್‌ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಎಚ್.ಮಲಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜಯವಂತಿ ಸೋನ್ಸ್, ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹ್ಮಾನ್, ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಝರೀನಾ, ಶಿಕ್ಷಕಿ ವಿನಯಾ, ಜ್ಯೋತಿ, ರಸೂಲ್ ಖಾನ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಫೀಕ್, ಸವಿತಾ, ನಸೀಮಾ, ರಮ್ಲತ್, ಭಾರತಿ, ವಸುಧಾ ಉಪಸ್ಥಿತರಿದ್ದರು.