ಯೋಗಥಾನ್‌ಗೆ 50 ಸಾವಿರ ಯೋಗಪಟುಗಳನ್ನು ಸೇರಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಸೆ.6: ನಗರದ ತಣ್ಣೀರುಬಾವಿ ಬೀಚ್ ಮತ್ತು ಮೂಡುಬಿದಿರೆಯ ಆಳ್ವಾಸ್ ಮೈದಾನದಲ್ಲಿ ಸೆ.17ರಂದು ನಡೆಯುವ ಯೋಗಥಾನ್‌ಗೆ ೫೦ ಸಾವಿರ ಯೋಗಪಟುಗಳನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕ್ರೀಡಾ ಇಲಾಖೆ, ನೆಹರೂಯುವಕೇಂದ್ರ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಿತ ಸಂಬಂಧಿಸಿದ ಇಲಾಖಾಧಿಕಾರಿಗಳು ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದರು.
‘ಯೋಗಥಾನ್-2022’ ಆಯೋಜನೆಯ ನಿಟ್ಟಿನಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆ.17ರ ಬೆಳಗ್ಗೆ 9ರಿಂದ 10ರವರೆಗೆ ನಡೆಯುವ ಯೋಗಥಾನ್‌ಗೆ ಯೋಗಪಟುಗಳನ್ನು ಕರೆತರಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಯ ವಿಶೇಷ ಅಧಿಕಾರಿಗಳು, ಜಿಲ್ಲೆಯಲ್ಲಿರುವ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಸಹಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಯೋಗಥಾನ್‌ನಲ್ಲಿ ಭಾಗವಹಿಸಲು ಜಾಗೃತಿ ಮೂಡಿಸುವಂತೆ ಆಯಾ ಕಾಲೇಜುಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕರೆ ನೀಡಿದರು.
ಜಿಪಂ ಸಿಇಒ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.