ದಿಲ್ಲಿ ಮದ್ಯ ನೀತಿ ಹಗರಣ: ಈ.ಡಿ.ಯಿಂದ ದೇಶದ ವಿವಿಧೆಡೆ 30ಕ್ಕೂ ಅಧಿಕ ಸ್ಥಳಗಳಳ್ಲಿ ದಾಳಿ

,ಸೆ.18: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತಾನು ನಡೆಸುತ್ತಿರುವ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಮಂಗಳವಾರ ದೇಶಾದ್ಯಂತ 30ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದೆ.
ಲಕ್ನೋ, ಗುರುಗ್ರಾಮ, ಚಂಡೀಗಢ,ಮುಂಬೈ,ಹೈದರಾಬಾದ್ ಮತ್ತಿತರ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಈ.ಡಿ. ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ ಆರಂಭಗೊಂಡ ಶೋಧ ಕಾರ್ಯಾಚರಣೆಯು ಸಂಜೆಯೂ ಮುಂದುವರಿದಿದೆಯೆಂದು ಅವು ತಿಳಿಸಿವೆ. ಆದರೆ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್‌ಸಿಸೋಡಿಯಾ ಅವರಿಗೆ ಸಂಬಂಧಿಸಿದ ಯಾವುದೇ ಸ್ಥಳದ ಮೇಲೆ ಇಂದು ದಾಳಿ ನಡೆದಿಲ್ಲವೆಂದು ಈ.ಡಿ. ಮೂಲಗಳು ತಿಳಿಸಿವೆ.
ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿದ ಎಫ್‌ಐಆರ್ ಆಧಾರದಲ್ಲಿ ಈ.ಡಿ. ಪ್ರಕರಣವನ್ನು ದಾಖಲಿಸಿದೆಯೆಂದು ಮೂಲಗಳು ತಿಳಿಸಿವೆ.
ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ದಿಲ್ಲಿ ಮುಖ್ಯಮಂತ್ರಿ ಮನೀಶ್‌ಸಿಸೋಡಿಯಾ ಅವರನ್ನು ಮೊದಲನೆಯ ಆರೋಪಿಯಾಗಿ ಗುರುತಿಸಿದೆ. ಭಾರತೀಯ ದಂಡೆಸಂಹಿತೆಯ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್ ಸಂಚು) ಹಾಗೂ 477-ಎ( ದಾಖಲೆಗಳ ತಿರುಚುವಿಕೆ)ಯಡಿ ಅವರ ವಿರುದ್ಧ ಫ್‌ಐಆರ್ ದಾಖಲಿಸಲಾಗಿದೆ. ಮದ್ಯ ಉದ್ಯಮಿಗಳಿಗೆ 30 ಕೋಟಿ ರೂ. ತೆರಿಗೆ ರಿಯಾಯಿತಿಯನ್ನು ನೀಡಿದ್ದಾರೆಂಬ ಆರೋಪವನ್ನು ಸಿಸೋಡಿಯಾ ವಿರುದ್ಧ ಸಿಬಿಐ ಹೊರಿಸಿದೆ. ಮದ್ಯದಂಗಡಿಗಳ ಪರವಾನಗಿಗಳ ಅವಧಿಯ ವಿಸ್ತರಣೆಯನ್ನು ಅವುಗಳ ಮಾಲಕರ ಇಚ್ಛೆಗೆ ಅನುಸಾರವಾಗಿ ವಿಸ್ತರಿಸಲಾಗಿದೆಯೆಂಬ ಆರೋಪವನ್ನು ಕೂಡಾ ಅವರ ವಿರುದ್ಧ ಹೊರಿಸಲಾಗಿದೆ. ಅಬಕಾರಿ ನಿಯಮಾವಳಿಗಳನ್ನು ಉಲ್ಲಂಘಿಸಿ ನೂತನ ಅಬಕಾರಿ ನೀತಿಗಳನ್ನು ರೂಪಿಸಲಾಗಿದೆಯೆಂಬ ಸಿಬಿಐ , ಎಫ್‌ಐಆರ್‌ನಲ್ಲಿ ಆಪಾದಿಸಿದೆ.







