104 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿಯ ಎರಡು ತಂಡಗಳ ಪ್ರವಾಸ: ಎನ್.ರವಿಕುಮಾರ್

ಬೆಂಗಳೂರು, ಸೆ.6: ಮಳೆ ತೀವ್ರತೆ ಕಡಿಮೆ ಆದ ಬಳಿಕ 104 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿಯ ಎರಡು ತಂಡಗಳ ಪ್ರವಾಸ ಏರ್ಪಡಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಮಂಗಳವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ ಆರಂಭಗೊಳ್ಳಬೇಕಿದ್ದ ರಾಜ್ಯಾಧ್ಯಕ್ಷರ ತಂಡದ ಪ್ರವಾಸ ಹಾಗೂ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇನ್ನೊಂದು ತಂಡದ ಪ್ರವಾಸವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದರು.
ಎರಡು ತಂಡಗಳ 104 ಕ್ಷೇತ್ರಗಳ ಪ್ರವಾಸ ಇದಾಗಿದೆ. ಫಲಾನುಭವಿಗಳ ಸಮಾವೇಶ, ಎಸ್ಸಿ, ಎಸ್ಟಿ, ಒಬಿಸಿ ಕಾರ್ಯಕರ್ತರ ಮನೆಯಲ್ಲಿ ಉಪಾಹಾರ ಮತ್ತು ಅದೇ ಪರಿಸರದಲ್ಲಿ ಸಭೆ ನಡೆಸಲಾಗುತ್ತದೆ. ಮಠ, ಮಂದಿರಗಳಿಗೆ ಭೇಟಿ ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಸಮಾವೇಶ ಮತ್ತು ಕ್ಷೇತ್ರ ಪ್ರವಾಸದಲ್ಲಿ ಭಾಗವಹಿಸುವರು. ಪಕ್ಷದ ಎಲ್ಲ ಜನಪ್ರತಿನಿಧಿಗಳು ಸಮಾವೇಶ ಹಾಗೂ ಕ್ಷೇತ್ರ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿ, ಬಳ್ಳಾರಿ, ಮೈಸೂರು, ಶಿವಮೊಗ್ಗ, ಬೆಂಗಳೂರು ಸೇರಿ ಪಾಲಿಕೆ ಇರುವ ಕಡೆಗಳಲ್ಲಿ ಪ್ರವಾಸ ನಡೆಯಲಿದೆ ಎಂದು ಅವರು ಹೇಳಿದರು.
ರಾಜ್ಯಾಧ್ಯಕ್ಷರ ತಂಡ ಪ್ರವಾಸದ 52 ಕ್ಷೇತ್ರಗಳಲ್ಲಿ ಬೂತ್, ಶಕ್ತಿ ಕೇಂದ್ರಗಳ, ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಪಂಚರತ್ನ-5 ಪ್ರಮುಖ ಕಾರ್ಯಕರ್ತರ ಸಭೆ ನಡೆಸಲಾಗುವುದು. ರೈತ ಸಮಾವೇಶ, ಎಸ್ಸಿ ಸಮಾವೇಶ, ಒಬಿಸಿ ಸಮಾವೇಶ, ಯುವ ಸಮಾವೇಶ, ಮಹಿಳಾ ಸಮಾವೇಶ, ಎಸ್ಟಿ, ಅಲ್ಪಸಂಖ್ಯಾತ ಬಂಧುಗಳ ಸಮಾವೇಶವನ್ನೂ ಆಯೋಜಿಸಲಾಗುತ್ತದೆ ಎಂದು ರವಿಕುಮಾರ್ ತಿಳಿಸಿದರು.
ಡಿ.15ರೊಳಗೆ 104 ಕ್ಷೇತ್ರ ಪ್ರವಾಸ ಮತ್ತು 7 ಸಮಾವೇಶಗಳನ್ನೂ ಯೋಜಿಸಿದೆ. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಸಮಾವೇಶವನ್ನು ಸಂಘಟಿಸಲಿದ್ದಾರೆ. ಪ್ರವಾಸ ಮತ್ತು ಸಮಾವೇಶ ಯಶಸ್ವಿಗಾಗಿ ಪ್ರಭಾರಿಗಳನ್ನು ನೇಮಿಸಲಾಗಿದೆ. 150 ಕ್ಷೇತ್ರ ಗೆಲುವಿನ ಗುರಿ ಮುಟ್ಟುವ ಹಿನ್ನೆಲೆಯಲ್ಲಿ ಕಾರ್ಯಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸುಮಾರು 50 ವರ್ಷಗಳಿಂದ ಕಂಡರಿಯದ ಮಳೆ ಬರುತ್ತಿದೆ. ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಎಲ್ಲ ಶಾಸಕರ ಜೊತೆ ಮಾತನಾಡಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಸೇವಾ ಚಟುವಟಿಕೆ ಆರಂಭಿಸಲು ಮತ್ತು ಅಗತ್ಯ ಇರುವ ಕಡೆ ವಸತಿ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ ಎಂದು ರವಿಕುಮಾರ್ ತಿಳಿಸಿದರು.
ಸೇತುವೆಗಳು ಹಾಳಾಗುತ್ತಿದೆ. ಕೆರೆ ಒತ್ತುವರಿ, ರಾಜಕಾಲುವೆ ಒತ್ತುವರಿ ಹಿಂದಿನಿಂದಲೇ ಬಂದ ಸಮಸ್ಯೆ. 50 ವರ್ಷಗಳಿಂದ ಆಗಿರುವ ಒತ್ತುವರಿಗಳು ಇದಕ್ಕೆ ಕಾರಣ. ಸೇವಾ ಚಟುವಟಿಕೆಯಿಂದ ಧಾವಿಸುವ ದೃಷ್ಟಿಯಿಂದ ಕಾರ್ಯಯೋಜನೆ ರೂಪಿಸಲಾಗುವುದು. ಸಂತ್ರಸ್ತರಿಗೆ ಆಹಾರ, ವಸತಿ ವ್ಯವಸ್ಥೆ ಮಾಡಲು ಪಕ್ಷ ಮುಂದಾಗಲಿದೆ. ಜೊತೆಗೆ ಸರಕಾರಕ್ಕೆ ಬೆಂಬಲ ನೀಡಲು ಕರೆ ನೀಡಲಾಗುವುದು. ಬೆಂಗಳೂರಿನಲ್ಲಿ ಒಬ್ಬರು ಪ್ರಧಾನ ಕಾರ್ಯದರ್ಶಿಗಳು ಮಳೆ ಸಂಬಂಧಿತ ಸೇವಾ ಚಟುವಟಿಕೆಗೆ ಪ್ರೇರಣೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಮುಂಬೈ, ದಿಲ್ಲಿ ಸೇರಿದಂತೆ ಅನೇಕ ನಗರಗಳಲ್ಲಿ ಭಾರಿ ಮಳೆಯಿಂದ ಸಮಸ್ಯೆ ಆಗಿತ್ತು. ಸರಕಾರ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಬದ್ಧತೆಯನ್ನು ಪ್ರದರ್ಶಿಸಲಿದೆ. ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವರು ಹೇಳಿದ್ದು, ಅದು ಅನಿ ನಕ್ಕೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.







