ವಿಮಾನ ನಿಲ್ದಾಣಗಳಲ್ಲಿ ಸಿಐಎಸ್‌ಎಫ್‌ನ 3 ಸಾವಿರಕ್ಕೂ ಅಧಿಕ ಹುದ್ದೆಗಳ ರದ್ದು
ಸೂಕ್ಷ್ಮಸಂವೇದಿಯಲ್ಲದ ಹುದ್ದೆಗಳಿಗೆ ಖಾಸಗಿ ಭದ್ರತಾ ಸಿಬ್ಬಂದಿ ನೇಮಕ

ಹೊಸದಿಲ್ಲಿ,ಸೆ.7: ಭಾರತೀಯ ವಿಮಾನನಿಲ್ದಾಣಗಳ ಭದ್ರತಾ ಸಂರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ 3 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. ಸೂಕ್ಷ್ಮ ಸಂವೇದನಾಕಾರಿಯಲ್ಲದ ಈ ಕರ್ತವ್ಯಗಳನ್ನು ಖಾಸಗಿ ಭದ್ರತಾ ಸಿಬ್ಬಂದಿಗಳು, ಕಣ್ಗಾವಲು ಹಾಗೂ ಸುರಕ್ಷತೆಗಾಗಿನ ಸ್ಮಾರ್ಟ್ ತಂತ್ರಜ್ಡಾನದ ನೆರವಿನೊಂದಿಗೆ ನಿರ್ವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕೇಂದ್ರ ಸರಕಾರದ ನಾಗರಿಕ ವಾಯುಯಾನ ಹಾಗೂ ಗೃಹ ಸಚಿವಾಲಯಗಳು. ನಾಗರಿಕ ವಾಯುಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) 2018-19ನೇ ಸಾಲಿನಲ್ಲಿ ಸಿದ್ಧಪಡಿಸಿದ ಈ ಜಂಟಿಯಾಗಿ ರೂಪಿಸಿದ ಈ ಕ್ರಿಯಾಯೋಜನೆಯನ್ನು ದೇಶಾದ್ಯಂತ 50 ವಿಮಾನನಿಲ್ದಾಣಗಳಲ್ಲಿ ಜಾರಿಗೆ ತರಲಾಗುತ್ತಿದೆ.
ಒಟ್ಟು 3049 ಸಿಐಎಸ್‌ಎಫ್ ನಾಗರಿಕ ವಾಯುಯಾನ ಭದ್ರತಾ ಹುದ್ದೆಗನ್ನು ತೆರವುಗೊಳಿಸಿ, ಬದಲಿಯಾಗಿ 1924 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಹಾಗೂ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಬ್ಯಾಗೇಜ್ ಸ್ಕ್ಯಾನರ್‌ಗಳಂತಹ ಸ್ಮಾರ್ಟ್ ಕಣ್ಗಾವಲು ತಂತ್ರಜ್ಞಾನಗಳನ್ನು ಪರ್ಯಾಯವಾಗಿ ಅಳವಡಿಸಲಾಗುವುದು ಎಂದು ವಾಯುಯಾನ ಭದ್ರತಾ ನಿಯಂತ್ರಣ ಸಂಸ್ತೆ ಬಿಸಿಎಎಸ್ ತಿಳಿಸಿದೆ.
ನೂತನ ಭದ್ರತಾ ಸಂರಚನೆಯು ವಾಯುಯಾನ ಕ್ಷೇತ್ರದಲ್ಲಿ 1900ಕ್ಕೂ ಅಧಿಕ ಹುದ್ದೆಗಳನ್ನು ಸೃಷ್ಟಿಸಲಿದೆ ಹಾಗೂ ಅಸ್ತಿತ್ವದಲ್ಲಿರುವ ಮತ್ತು. ನೂತನ ವಿಮಾನನಿಲ್ದಾಗಳಲ್ಲಿ ಭದ್ರತಾ ಕರ್ತವ್ಯದ ಹೆಚ್ಚಳದ ಅವಶ್ಯಕತೆಗಳನ್ನು ಈಡೇರಿಸಲು ಸಿಐಎಸ್‌ಎಫ್‌ಗೆ ಈ ಉಪಕ್ರಮವು ಮಾನವಶಕ್ತಿಯನ್ನು ಒದಗಿಸಲಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಭದ್ರತಾ ಸಿಬ್ಬಂದಿಯನ್ನು ದಿಲ್ಲಿ, ಮುಂಬೈ ಹಾಗೂ ಮತ್ತಿತರ ವಿಮಾನನಿಲ್ದಾಣಗಳಲ್ಲಿ, ಸರತಿ ಸಾಲುಗಳ ನಿರ್ವಹಣೆ, ವಿಮಾನನಿಲ್ದಾಣ ಸಿಬ್ಬಂದಿಗೆ ಹಾಗೂ ಪ್ರಯಾಣಿಕರಿಗೆ ಭದ್ರತಾ ನೆರವು, ಟರ್ಮಿನಲ್ ಪ್ರದೇಶದೊಳಗಿರುವ ನಿರ್ದಿಷ್ಟ ಆಗಮನ ಹಾಗೂ ನಿರ್ಗಮನ ಪಾಯಿಂಟ್‌ಗಳ ಕಾವಲು ಇತ್ಯಾದಿ ಅತಿ ಸೂಕ್ಷ್ಮವಲ್ಲದ ಕರ್ತವ್ಯಗಳಿಗೆ ನಿಯೋಜಿಸಲಾಗುವುದು ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಆದರೆ ಆಗಮನ ಸ್ಥಳದಲ್ಲಿ ಪ್ರಯಾಣಿಕರ ಪರಿಚಯದ ದಾಖಲೆಗಳ ಪರಿಶೀಲನೆ, ಪ್ರಯಾಣಿಕರ ತಪಾಸಣೆ, ವಿಧ್ವಂಸಕ ಕೃತ್ಯ ನಿರೋಧಕ ಕವಾಯತುಗಳು, ವಿಮಾನನಿಲ್ದಾಣಗಳಿಗೆ ಸಂಪೂರ್ಣ ಭಯೋತ್ಪಾದನಾ ನಿರೋಧಕ ಸುರಕ್ಷತಾ ಕವಚವನ್ನು ಒದಗಿಸುವುದು ಇತ್ಯಾದಿ ಕರ್ತವ್ಯಗಳನ್ನು ಸಿಐಎಸ್ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆಂದು ಅವರು ಹೇಳಿದ್ದಾರೆ.







