ನೂತನ ಬ್ರಿಟನ್ ಪ್ರಧಾನಿ ಟ್ರಸ್ ಗೆ ಅಚಲ ಬೆಂಬಲ: ಬೋರಿಸ್ ಜಾನ್ಸನ್
ಲಂಡನ್, ಸೆ.೬: ತನ್ನ ಉತ್ತರಾಧಿಕಾರಿ ಲಿಝ್ ಟ್ರಸ್‌ಗೆ ಅಚಲ ಬೆಂಬಲ ನೀಡುವುದಾಗಿ ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಬೋರಿಸ್ ಜಾನ್ಸನ್ ಮಂಗಳವಾರ ವಾಗ್ದಾನ ನೀಡಿದ್ದಾರೆ.
ಬ್ರಿಟಿಷ್ ಪ್ರಧಾನಿಯಾಗಿ ಡೌನಿಂಗ್ ಸ್ಟಿçÃಟ್(ಪ್ರಧಾನಿಯ ಕಾರ್ಯಾಲಯ)ನಲ್ಲಿ ಅಂತಿಮ ದಿನ ಹಾಜರಾದ ಬಳಿಕ ಅವರು ತನ್ನ ರಾಜೀನಾಮೆ ಸಲ್ಲಿಸಲು ತೆರಳುವ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿದ್ದರು. `ತನ್ನ ಕಾರ್ಯವನ್ನು ಪೂರೈಸಿದ ಬಳಿಕ ಬೂಸ್ಟರ್ ರಾಕೆಟ್ ಪೆಸಿಫಿಕ್ ಸರೋವರದ ಮೂಲೆಗೆ ಪತನವಾದಂತೆ ' ಎಂದು ಪ್ರಧಾನಿಯಾಗಿ ತನ್ನ ಕಾರ್ಯಾವಧಿಯ ಕುರಿತ ಪ್ರಶ್ನೆಗೆ ತನ್ನ ವಿಶಿಷ್ಟ ವಾಕ್ಚಾತುರ್ಯದ ಮೂಲಕ ಉತ್ತರಿಸಿದರು. ಲಿಝ್ ಮತ್ತು ಹೊಸ ಸರಕಾರವನ್ನು ಪ್ರತೀ ಹಂತದಲ್ಲೂ ಬೆಂಬಲಿಸುತ್ತೇನೆ. ನೂತನ ಪ್ರಧಾನಿಗೆ ತಕ್ಷಣ ಎದುರಾಗುವ ಇಂಧನದ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸದಸ್ಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಬೆಂಬಲಿಸಬೇಕು ಎಂದವರು ಆಗ್ರಹಿಸಿದರು. ಡಿಲಿನ್(ತನ್ನ ನಾಯಿ) ಮತ್ತು ಲ್ಯಾರಿ(ಪ್ರಧಾನಿ ಕಚೇರಿಯ ಬೆಕ್ಕು) ತಮ್ಮೊಳಗಿನ ಸಾಂದರ್ಭಿಕ ಗೊಂದಲವನ್ನು ಮರೆತು ಮುಂದೆ ಸಾಗಬಹುದಾದರೆ ಕನ್ಸರ್ವೇಟಿವ್ ಪಕ್ಷಕ್ಕೂ ಇದು ಸಾಧ್ಯ ಎಂದವರು ಇದೇ ಸಂದರ್ಭ ಹೇಳಿದರು.
ಸಾಮಾನ್ಯವಾಗಿ ಬ್ರಿಟನ್‌ನಲ್ಲಿ ಅಧಿಕಾರ ಹಸ್ತಾಂತರ ತ್ವರಿತ ಪ್ರಕ್ರಿಯೆಯಾಗಿದೆ. ನಿರ್ಗಮಿತ ಮತ್ತು ನೂತನ ಮುಖಂಡರು ಪ್ರಧಾನಿ ಕಾರ್ಯಾಲಯದಿಂದ ಸ್ವಲ್ಪ ದೂರವಿರುವ ಮಧ್ಯ ಲಂಡನ್‌ನ ಬಕಿಂಗ್ಹಾಮ್ ಅರಮನೆಗೆ ತೆರಳಿ ರಾಣಿಯನ್ನು ಭೇಟಿಯಾಗುತ್ತಾರೆ. ಆದರೆ ಈಗ ಲಂಡನ್‌ನ ರಾಣಿ ಸ್ಕಾಟ್‌ಲ್ಯಾಂಡ್‌ನ ರೆಸಾರ್ಟ್ನಲ್ಲಿ ರಜೆ ಕಳೆಯಲೆಂದು ಹೋಗಿದ್ದು ಆರೋಗ್ಯ ಹದಗೆಟ್ಟಿರುವ ಕಾರಣ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಜಾನ್ಸನ್ ಹಾಗೂ ಟ್ರಸ್ ಇಬ್ಬರೂ ಸುಮಾರು ೧,೬೦೦ ಕಿ.ಮೀ ದೂರ ಪ್ರಯಾಣಿಸುವ ಅನಿವಾರ್ಯತೆಯಿದೆ.