ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಬಂಧಿ ಯುವಕನಿಂದ ಆ್ಯಸಿಡ್ ದಾಳಿ, ಚಾಕು ಇರಿತ

ನೆಲ್ಲೋರ್ (ಆಂಧ್ರಪ್ರದೇಶ): ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿಯ ಮೇಲೆ ದೂರದ ಸಂಬಂಧಿ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿ, ಚಾಕುವಿನಿಂದ ಕುತ್ತಿಗೆಗೆ ಇರಿದ ಪ್ರಕರಣ ಆಂಧ್ರಪ್ರದೇಶದ ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೋರ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಬಾಲಕಿ ಒಬ್ಬಳೇ ಇದ್ದಾಗ ಈ ದಾಳಿ ನಡೆಸಲಾಗಿದೆ. ಸಂತ್ರಸ್ತೆಯನ್ನು ನೆಲ್ಲೋರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗಿದೆ.
ಸಂತ್ರಸ್ತೆಗೆ ಆಂಧ್ರ ಸರ್ಕಾರ ಐದು ಲಕ್ಷ ರೂಪಾಯಿಗಳ ನೆರವು ಘೋಷಿಸಿದೆ. ಪ್ರಕರಣದ ತ್ವರಿತ ವಿಚಾರಣೆಗೆ ಅನುವಾಗುವಂತೆ ಒಂದು ವಾರದ ಒಳಗಾಗಿ ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯನ್ನು ನಾಗರಾಜು ಎಂದು ಗುರುತಿಸಲಾಗಿದ್ದು, ವಸ್ತು ಲಾಭಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಬೇಕಾಗಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಾಲಕಿಯ ದೇಹಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಬಾಲಕಿಯ ಕೂಗು ಕೇಳಿ ನೆರೆಯವರು ಧಾವಿಸಿದ್ದು, ರಕ್ತದ ಮಡುವಿನಲ್ಲಿ ಬಾಲಕಿ ಬಿದ್ದುದನ್ನು ಗಮನಿಸಿ ಪೋಷಕರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಕಳುಹಿಸಿದರು ಎಂದು ಪೊಲೀಸರು ಹೇಳಿದ್ದಾರೆ.







