ಸರಕಾರದಿಂದ ಎನ್.ಐ.ಎ. ದುರ್ಬಳಕೆ: ಪಿಎಫ್ಐ ಆರೋಪ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ

ಮಂಗಳೂರು, ಸೆ.7: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯ ನೆಪದಲ್ಲಿ ಎನ್.ಐ.ಎ.(NIA)ಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ನೇತೃತ್ವದ ಸರಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ನಾಯಕರನ್ನು ಗುರಿಪಡಿಸುತ್ತಿದೆ. ಸರಕಾರ ಹಗೆತನದ ಕ್ರಮ ಅನುಸರಿಸುತ್ತಿದೆ ಎಂದು ಪಿಎಫ್ ಐ ಆರೋಪಿಸಿದೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್ ಯ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಎ.ಕೆ.ಅಶ್ರಫ್, ದ.ಕ. ಜಿಲ್ಲೆಯ ಸರಣಿ ಹತ್ಯೆ ಪ್ರಕರಣ ಸಹಿತ, ರಾಜ್ಯದಲ್ಲಿ ಇತ್ತೀಚೆಗೆ ಹಲವು ಕೊಲೆ ಪ್ರಕರಣಗಳು ನಡೆದಿವೆ. ಆದರೆ ಶಿವಮೊಗ್ಗದ ರೌಡಿ ಶೀಟರ್ ಹರ್ಷ ಮತ್ತು ಸುಳ್ಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ತನಿಖೆಗೆ ನೀಡಿದ ಮಹತ್ವವನ್ನು ರಾಜ್ಯ ಬಿಜೆಪಿ ಸರಕಾರ ಬೆಳಗಾವಿಯ ಅರ್ಬಾಝ್, ಸಮೀರ್ ಶಹಾಪೂರ, ಸುಳ್ಯದ ಮಸೂದ್, ಸುರತ್ಕಲ್ ನ ಫಾಝಿಲ್ ಹತ್ಯೆ ಪ್ರಕರಣದಲ್ಲಿ ನೀಡಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ದ.ಕ., ಮೈಸೂರು, ಕೊಡಗಿನ 33 ಸ್ಥಳಗಳಲ್ಲಿ ಎನ್‌ಐಎ ಶೋಧ
ಹರ್ಷನ ಕೊಲೆ ಗ್ಯಾಂಗ್ ವಾರ್‌ಗೆ ಸಂಬಂಧಿಸಿದ್ದಾಗಿದೆ ಮತ್ತು ಪ್ರವೀಣ್ ಕೊಲೆ ಸ್ಥಳೀಯವಾಗಿ ಕೋಮು ವೈಷಮ್ಯದಿಂದ ನಡೆದ ಘಟನೆ ಎಂಬುದನ್ನು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಕೋಮು ವೈಷಮ್ಯದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಸಮಾನವಾಗಿ ಪರಿಗಣಿಸಬೇಕಾಗಿದ್ದ ಬಿಜೆಪಿ ಸರಕಾರ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ. ಮುಸ್ಲಿಮ್ ಯುವಕರು ಆರೋಪಿಗಳಾಗಿರುವ ಪ್ರಕರಣಗಳನ್ನು ಮಾತ್ರ ಎನ್.ಐ.ಎ.ಗೆ ವಹಿಸುತ್ತಿರುವುದು ಸಂಶಯಾಸ್ಪದವಾಗಿದೆ ಎಂದು ಎ.ಕೆ.ಅಶ್ರಫ್ ಹೇಳಿದರು.
ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಸಾಮಾನ್ಯ ಚೂರಿ ಇರಿತ ಘಟನೆಯ ಆರೋಪಿಗಳಾಗಿರುವ ಮುಸ್ಲಿಮ್ ಯುವಕರ ಮೇಲೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದು ಬಿಜೆಪಿ ಎನ್.ಐ.ಎಯಂತಹ ತನಿಖಾ ಸಂಸ್ಥೆಗಳನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ. ಪ್ರವೀಣ್ ಕೊಲೆ ಘಟನೆಯ ಬಳಿಕ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದರು. ಈ ಕಾರಣಕ್ಕಾಗಿ ಕಾರ್ಯಕರ್ತರ ಆಕ್ರೋಶವನ್ನು ತಣಿಸಲು ರಾಜ್ಯ ಸರಕಾರವು ಈ ಪ್ರಕರಣದ ಎನ್.ಐ.ಎ ತನಿಖೆ ವಹಿಸುವ ಮೂಲಕ ಪಿಎಫ್ಐ ವಿರುದ್ಧ ಪ್ರತೀಕಾರಾತ್ಮಕ ಕ್ರಮವನ್ನು ಕೈಗೊಂಡಿದೆ. ಈ ಬೆಳವಣಿಗೆಗಳ ನಂತರ ಎನ್.ಐ.ಎಯನ್ನು ದುರ್ಬಳಕೆ ಮಾಡಿಕೊಂಡು ಇದೀಗ ನಮ್ಮ ಸಂಘಟನೆಗಳ ನಾಯಕರ ಮನೆ, ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಗಾಗಿ ಘನವೆತ್ತ ಸಾಂವಿಧಾನಿಕ ಸಂಸ್ಥೆಗಳನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅಶ್ರಫ್ ಆರೋಪಿಸಿದ್ದಾರೆ.
ಬಿಜೆಪಿ ಸರಕಾರವು ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ತನ್ನ ಬದ್ಧ ಸೈದ್ಧಾಂತಿಕ ವಿರೋಧಿಯಾಗಿರುವ ಪಿಎಫ್ಐ ವಿರುದ್ಧ ವ್ಯಾಪಕ ಅಪಪ್ರಚಾರಗಳನ್ನು ನಡೆಸುತ್ತಾ ಬರುತ್ತಿದೆ. ಮಾತ್ರವಲ್ಲ, ಸಂದರ್ಭಕ್ಕೆ ಅನುಸಾರವಾಗಿ ಇ.ಡಿ., ಎನ್.ಐ.ಎ ಮೊದಲಾದ ತನಿಖಾ ಏಜೆನ್ಸಿಗಳನ್ನು ನಿರಂತರವಾಗಿ ಭೂ ಬಿಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದರ ವಿರುದ್ಧ ಪಿಎಫ್ಐ ಪ್ರಜಾಸತ್ತಾತ್ಮಕ ಕಾನೂನುಗಳ ಮೂಲಕ ಹೋರಾಟ ಮುಂದುವರಿಸಲಿದೆ ಎಂದು ಅಶ್ರಫ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಿಎಫ್ಐ ದ.ಕ. ಜಿಲ್ಲಾಧ್ಯಕ್ಷ್ ಇಜಾಝ್ ಅಹ್ಮದ್, ಮಂಗಳೂರು ನಗರಾಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.