ತೊಕ್ಕೊಟ್ಟು: ಕಣಜದ ಹುಳು ದಾಳಿಗೊಳಗಾಗಿದ್ದ ವ್ಯಕ್ತಿ ಮೃತ್ಯು

ಜಿತನ್ ರೆಸ್ಕಿನ - ಮೃತ ವ್ಯಕ್ತಿ
ಉಳ್ಳಾಲ: ಕಣಜದ ಹುಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉಳ್ಳಾಲ ಬೈಲಿನ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳ್ಳಾಲ ಬೈಲು ನಿವಾಸಿ ಜಿತನ್ ರೆಸ್ಕಿನ (38) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಜಿತನ್ ಅವರು ಮಂಗಳವಾರ ಬೆಳಗ್ಗೆ ಉಳ್ಳಾಲ ಬೈಲಿನ ಭವಾನಿ ಎಂಬವರ ಮನೆಯಲ್ಲಿ ಮರವೇರುವ ಯಂತ್ರದ ಮೂಲಕ ತೆಂಗಿನಕಾಯಿ ಕೀಳುತ್ತಿದ್ದರು. ಈ ವೇಳೆ ತೆಂಗಿನಲ್ಲಿ ಗೂಡು ಕಟ್ಟಿದ್ದ ನೂರಕ್ಕೂ ಅಧಿಕ ಕಣಜದ ಹುಳುಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ್ದವು. ಗಂಭೀರ ಗಾಯಗೊಂಡಿದ್ದ ಜಿತನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಜಿತನ್ ಅವರು ಮೂಲತಃ ಮಂಗಳೂರಿನ ನೀರುಮಾರ್ಗದವರು ಎಂದು ತಿಳಿದು ಬಂದಿದೆ.
ಇದೇ ವೇಳೆ ರಸ್ತೆಯಲ್ಲಿ ಶಾಲಾ ವಾಹನದ ಕಡೆ ತೆರಳುತ್ತಿದ್ದ ಪ್ರವೀಣ್ ಪೂಜಾರಿ ಮತ್ತು ಅವರ ಮಗಳು ಧೃತಿ(7) ಕಣಜದ ಹುಳು ಕಡಿತದಿಂದ ಗಾಯಗೊಂಡಿದ್ದು, ಇಬ್ಬರನ್ನು ಚಿಕಿತ್ಸೆಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪ್ರವೀಣ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.