ಸೆ.10ರ ಹೆದ್ದಾರಿ ಪ್ರಾಧಿಕಾರದ ವಿರುದ್ಧದ ಪ್ರತಿಭಟನೆಗೆ ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರ ಬೆಂಬಲ

ಮಂಜೇಶ್ವರ, ಸೆ.7: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸೆ.10ರಂದು ರಾ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರ ಬೆಂಬಲ ಘೋಷಿಸಿದೆ.
ಕುಂಜತ್ತೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರದ ಅಧ್ಯಕ್ಷ ಜಬ್ಬಾರ್ ಪದವು, ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿ ನಡೆಯುವಾಗ ಎರಡೂ ಬದಿಗಳಲ್ಲಿರುವ ಜನರು ಮೊದಲೇ ಜಮೀನು ಮನೆ ವ್ಯಾಪಾರ ಕಳಕೊಂಡು ಕಂಗಾಲಾಗಿದ್ದಾರೆ. ಪರಿಹಾರದ ಮೊತ್ತದಲ್ಲೂ ತಾರತಮ್ಯ ಅನುಭವಿಸಿದ್ದಾರೆ. ಆದರೂ ನಮ್ಮ ದೇಶದ ಮತ್ತು ರಾಜ್ಯದ ಅಭಿವೃದ್ದಿಗಾಗಿ ಎಲ್ಲವನ್ನೂ ಸಹಿಸಿ ಸುಮ್ಮನಾಗಿದ್ದಾರೆ. ಇಷ್ಟೆಲ್ಲಾ ತ್ಯಾಗವನ್ನು ಸಹಿಸಿದ ನಾಡಿನ ಜನತೆಗೆ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರದ ನಡೆ ಖಂಡನೀಯ ಎಂದು ಹೇಳಿದ್ದಾರೆ.
ತಲಪಾಡಿ ಯಿಂದ ಕರೋಡಾ ವರೆಗಿನ ರಸ್ತೆಯಲ್ಲಿ ಎರಡು ಅಂಡರ್ ಪಾಸ್ ಗಳನ್ನು ನಿರ್ಮಿಸಿಕೊಡಬೇಕು ಎಂಬ ಬೇಡಿಕೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಇಟ್ಟಿದ್ದರೂ ರಾಜಕೀಯ ನೇತಾರರ ಹಾಗೂ ಗುತ್ತಿಗೆದಾರರ ಜೊತೆ ಹಲವು ಚರ್ಚೆಗಳು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸೆ.10ರಂದು ಅಪರಾಹ್ನ 2:30ಕ್ಕೆ ತೂಮಿನಾಡಿನಿಂದ ಉದ್ಯಾವರ 10ನೇ ಮೈಲ್ ವರೆಗೆ ಪ್ರತಿಭಟನಾ ರಾಲಿ ನಡೆಯಲಿದೆ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಹಮೀದ್, ಕುಂಞಿಮೋನು, ಎಂ.ಕೆ.ಮಜೀದ್ ಹಾಗೂ ಹಸೈನಾರ್ ಉಪಸ್ಥಿತರಿದ್ದರು.







