ಪುಟಾಣಿ ಹಾಡುಗಾರರಿಗಾಗಿ ‘ಹಾಡು ನೀ ಹಾಡು’ ಕಾರ್ಯಕ್ರಮ

ಉಡುಪಿ, ಸೆ.7: ಮಣಿಪಾಲ ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾ ವಂತ ಪುಟಾಣಿ ಹಾಡುಗಾರರಿಗಾಗಿ ‘ಹಾಡು ನೀ ಹಾಡು’ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥೆ ಸರಿತಾ ಸಂತೋಷ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಆಡಿಷನ್ ಸೆ.11ರಂದು ಉಡುಪಿ, ಕುಂದಾಪುರದಲ್ಲಿ, ಸೆ.18 ರಂದು ಮಂಗಳೂರು, ಮೂಡಿಬಿದ್ರಿ, ಪುತ್ತೂರಿನಲ್ಲಿ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಉಡುಗೊರೆ ಜೊತೆಗೆ ಜಿಲ್ಲೆಯ ಹೆಸರಾಂತ ಗಾಯಕರು, ನಟನಟಿಯರನ್ನು ಭೇಟಿ ಮಾಡುವ, ಮಾತನಾಡುವ ಅವಕಾಶವೂ ದೊರೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 5ರಿಂದ 10ನೇ ತರಗತಿ ಮಕ್ಕಳಿಗೆ ಮಾತ್ರ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಆಯ್ಕೆಗೊಂಡ ಹಾಡುಗಾರರಿಗೆ ಜಿಲ್ಲೆಯ ಹೆಸರಾಂತ ಸಂಗೀತ ಪ್ರವೀಣರಿಂದ ಮಾರ್ಗದರ್ಶನ ಜೊತೆಗೆ ಯಶಸ್ಸಿನ ಹಾದಿಯನ್ನು ತೋರಿಸಲಾಗುವುದು. ಈ ಕಾರ್ಯಕ್ರಮ ಆರು ತಿಂಗಳುಗಳ ಕಾಲ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಕಾರ್ಯಕ್ರಮವು ವಿ4 ಚಾನೆಲ್ ಮೂಲಕ ಪ್ರತಿ ಶನಿವಾರ -ರವಿವಾರ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ರಿಜಿಸ್ಟ್ರೇಷನ್ ಪ್ರಾರಂಭವಾಗಿದೆ. ಜೊತೆಗೆ ಆಡಿಷನ್ ಸ್ಥಳದಲ್ಲಿಯೂ ಕೂಡ ನೋಂದಾವಣೆ ಮಾಡಬಹುದು. ಶೃತಿ ಪೆಟ್ಟಿಗೆ, ತಾಳ, ಲಯ, ಕರೋಕೆ ಇತ್ಯಾದಿ ಸಂಗೀತ ಪರಿಕರಗಳನ್ನ ಬಳಸದೆ ಭಾವಗೀತೆ, ಜಾನಪದ ಗೀತೆ, ಸಿನಿಮಾ ಹಾಡು ಸಹಿತ ಯಾವುದೇ ಕನ್ನಡ ಹಾಡನ್ನು ಹಾಡಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಪಾ ಪ್ರಸೀದ್, ಜಯಂತ್ ಐತಾಳ್, ಸುಹಾಸ್ ಕೌಶಿಕ್, ಗೌತಮ್ ತಲ್ವಾಲ್ಕರ್, ಸೌಜನ್ಯ ವಿ. ಉಪಸ್ಥಿತರಿದ್ದರು.







