ಉಡುಪಿ; ಮತ್ತೆ ಚುರುಕಾದ ಮಳೆ; ಎರಡು ಮನೆಗಳಿಗೆ ಹಾನಿ

ಉಡುಪಿ, ಸೆ.7: ಜಿಲ್ಲೆಯಲ್ಲಿ ಮಂಗಳವಾರದಿಂದ ಮಳೆ ಮತ್ತೆ ಚುರುಕು ಗೊಂಡಿದೆ. ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ರಾತ್ರಿಯಿಡೀ ಸುರಿದ ಮಳೆ ಇಂದು ಸಹ ಬಿಟ್ಟು ಬಿಟ್ಟು ಬರುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಇನ್ನೂ ಎರಡು ದಿನ ಆರೆಂಜ್ ಅಲರ್ಟ್‌ನ್ನು ಘೋಷಿಸಲಾಗಿದೆ.
ಮಳೆಯಿಂದಾಗಿ ಕಾಪು ತಾಲೂಕು ಎಲ್ಲೂರು ಗ್ರಾಮದ ಸಂದ್ಯಾ ಎಂಬವರ ಮನೆಗೆ ಭಾಗಶ: ಹಾನಿಯಾಗಿದ್ದು ಒಂದೂವರೆ ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಕುಂದಾಪುರ ತಾಲೂಕು ಕೊರ್ಗಿಯ ಪ್ರಶಾಂತ ಆಚಾರಿ ಎಂಬವರ ಮನೆಯೂ ಮಳೆಯಿಂದ ಭಾಗಶ: ಹಾನಿಗೊಂಡಿದ್ದು, 1.30 ಲಕ್ಷ ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಇಂದು ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 34 ಮಿ.ಮೀ.ಮಳೆಯಾಗಿದೆ. ಬ್ರಹ್ಮಾವರದಲ್ಲಿ ಅತ್ಯಧಿಕ 51.1ಮಿ.ಮೀ. ಮಳೆಯಾದರೆ, ಬೈಂದೂರಿನಲ್ಲಿ 10.6 ಮಿ.ಮೀ. ಕನಿಷ್ಠ ಮಳೆ ಬಿದ್ದಿದೆ. ಉಳಿದಂತೆ ಕಾಪು 50.0, ಹೆಬ್ರಿ 48.4, ಕಾರ್ಕಳ 42.8, ಉಡುಪಿ 27.5 ಹಾಗೂ ಕುಂದಾಪುರದಲ್ಲಿ 24.6ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.





