ಹಿರಿಯಡ್ಕ; ಪಾಳು ಬಿದ್ದ ಮನೆಯೊಳಗೆ ಬಂಧಿಯಾಗಿದ್ದ ಚಿರತೆಯ ರಕ್ಷಣೆ
►10 ಗಂಟೆಗಳ ನಿರಂತರ ಕಾರ್ಯಾಚರಣೆ

ಹಿರಿಯಡ್ಕ, ಸೆ.7: ಹಿರಿಯಡ್ಕದ ಕಾಲೇಜು ಸಮೀಪದ ಹಾಡಿಯಲ್ಲಿರುವ ಪಾಳುಬಿದ್ದ ಮನೆಯೊಂದರ ಒಳಗೆ ಸಿಲುಕಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ತಂಡ ಬುಧವಾರ ನಡೆಸಿದ ನಿರಂತರ 10 ಗಂಟೆಗಳ ಕಾರ್ಯಾಚರಣೆಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಬೇಟೆ ಅರಸಿ ನಾಡಿಗೆ ಬಂದ ಚಿರತೆಯೊಂದು ಮಾಜಿ ಜಿಪಂ ಸದಸ್ಯೆ ಚಂದ್ರಿಕಾ ರಂಜನ್ ಕೇಳ್ಕಾರ್ ಎಂಬವರ ಪಾಳು ಬಿದ್ದ ಮನೆಯ ಮಾಡಿನ ಓಡಾಡುವಾಗ ಹೆಂಚು ಮುರಿದು ಒಳಗೆ ಬಿತ್ತೆನ್ನಲಾಗಿದೆ. ಹೀಗೆ ಕಳೆದ ಎರಡು ಮೂರು ದಿನಗಳಿಂದ ಚಿರತೆ ಹೊರಗೆ ಬರಲಾರದೆ ಮನೆಯೊಳಗೆಯೇ ಬಂಧಿಯಾಗಿತ್ತು.
ರಂಜನ್ ಕೇಳ್ಕಾರ್ ಅವರ ಮನೆ ಕೆಲಸದಾಳು, ಮಂಗಳವಾರ ಈ ಪಾಳುಬಿದ್ದ ಮನೆಗೆ ಬಂದಾಗ ಒಳಗೆ ಚಿರತೆ ಇರುವುದು ಗಮನಕ್ಕೆ ಬಂದಿತು. ಕೂಡಲೇ ಈ ಕುರಿತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಯಿತು. ಇಂದು ಬೆಳಗ್ಗೆ 10 ಗಂಟೆ ಸ್ಥಳಕ್ಕೆ ಆಗಮಿಸಿದ ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ನೇತೃತ್ವದ ತಂಡ ಚಿರತೆ ರಕ್ಷಣೆಗೆ ಮುಂದಾಯಿತು.
ಅದಕ್ಕಾಗಿ ಕಾರ್ಕಳದಿಂದ ಗನ್ ತರಿಸಿ, ಮಂಗಳೂರು ಪಿಲಿಕುಳದ ಅರವಳಿಕೆ ತಜ್ಞೆ ಡಾ.ಮೇಘನಾ ಅವರನ್ನು ಕರೆಸಲಾಯಿತು. ಸಂಜೆ ವೇಳೆ ಏಣಿಯ ಮೂಲಕ ಕಿಟಕಿ ಯಿಂದ ಡಾ.ಮೇಘನಾ ಚಿರತೆಗೆ ಅರವಳಿಕೆ ಮದ್ದನ್ನು ನೀಡಿದರು. ಇದರಿಂದ ಚಿರತೆ ಪ್ರಜ್ಞೆ ತಪ್ಪಿ ಬಿತ್ತು. ಬಳಿಕ ಇದನ್ನು ಖಚಿತ ಪಡಿಸಿಕೊಂಡ ತಂಡ, ಮನೆ ಒಳಗೆ ಪ್ರವೇಶಿಸಿ ಚಿರತೆಯನ್ನು ಸಂಜೆ 7.30ರ ಸುಮಾರಿಗೆ ರಕ್ಷಿಸಲಾಯಿತು.
ಮೂರು ವರ್ಷದ ಗಂಡು ಚಿರತೆಯಾಗಿದ್ದು, ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಚಿರತೆಗೆ ವೈದ್ಯಾಧಿಕಾರಿಗಳ ಮೂಲಕ ಚಿಕಿತ್ಸೆ ನೀಡಲಾಗಿದೆ. ಅರಣ್ಯ ಸಿಬ್ಬಂದಿಗಳಾದ ರಜಿ ಮ್ಯಾಥ್ಯೂ, ಸುನೀಶ್ ಬಾಬು ಈ ಕಾರ್ಯಾಚರಣೆಯಲ್ಲಿದ್ದರು.








