ಉಮೇಶ್ ಕತ್ತಿ ಪತ್ನಿಗೆ ಪ್ರಧಾನಿ ಸಂತಾಪ ಪತ್ರ

ಬೆಂಗಳೂರು, ಸೆ.7: ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ(61) ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಶೀಲಾ ಉಮೇಶ್ ಕತ್ತಿಗೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಕ ಪತ್ರ ಬರೆದಿದ್ದಾರೆ.
ಉಮೇಶ್ ಕತ್ತಿಯವರ ನಿಧನದ ಬಗ್ಗೆ ತಿಳಿದು ನನಗೆ ಅತೀವ ನೋವಾಗಿದೆ. ತೀವ್ರ ದುಃಖದ ಈ ಸಂದರ್ಭದಲ್ಲಿ ನನ್ನ ಸಂತಾಪಗಳು ನಿಮ್ಮ ಕುಟುಂಬದೊಂದಿಗೆ ಇದೆ. ಅನುಭವಿ ನಾಯಕರಾದ ಉಮೇಶ ಕತ್ತಿ ಅವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದರು ಎಂದು ಪ್ರಧಾನಿ ತಿಳಿಸಿದ್ದಾರೆ.
ಓರ್ವ ಶಾಸಕ ಹಾಗೂ ಸಮರ್ಥ ಆಡಳಿತಗಾರರಾಗಿ ಉಮೇಶ್ ಕತ್ತಿ ರಾಜ್ಯದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಡೆಸಿದಂತಹ ಅವಿರತ ಪ್ರಯತ್ನಗಳು ಸದಾ ಸ್ಮರಣೀಯ. ಉತ್ತಮ ಸಂಘಟನಾ ಕೌಶಲ್ಯ ಹೊಂದಿದ್ದ ಅವರು, ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದರು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಸಕಲ ಸರಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ
ಉಮೇಶ್ ಕತ್ತಿ ಅಗಲಿಕೆಯಿಂದ ಆಗಿರುವ ನಷ್ಟದ ಕುರಿತು ವ್ಯಕ್ತಪಡಿಸಲು ಪದಗಳು ಇಲ್ಲ. ಅವರು ಕೇವಲ ಕುಟುಂಬದ ಆಧಾರಸ್ತಂಭವಾಗಿರಲಿಲ್ಲ, ಇಡೀ ಸಮಾಜಕ್ಕೆ ಆಧಾರಸ್ತಂಭವಾಗಿದ್ದರು. ಅವರು ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರು ಪ್ರತಿಪಾದಿಸಿದ ಮೌಲ್ಯಗಳು, ಆದರ್ಶನಗಳು ನಮ್ಮೊಂದಿಗೆ ಸದಾ ಜೀವಂತವಾಗಿರುತ್ತವೆ. ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ಕುಟುಂಬದವರಿಗೆ ಮತ್ತು ಬೆಂಬಲಿಗರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.








