ಕುಂದಾಪುರ; ಕತ್ತು ಹಿಸುಕಿ ಯುವಕನ ಕೊಲೆ: ಮರಣೋತ್ತರ ಪರೀಕ್ಷೆಯಿಂದ ದೃಢ
ಆರೋಪಿ ಅಕ್ಷಯ್ ಸಹಿತ ಮೂವರು ಪೊಲೀಸ್ ವಶಕ್ಕೆ

ಕುಂದಾಪುರ, ಸೆ.9: ಆರು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿ ಬಳಿಕ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ಮೃತ ಯುವಕನನ್ನು ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಸಂಬಂಧ ಶಂಕರನಾರಾಯಣ ಪೊಲೀಸರು ಕೊಲೆ ಪ್ರಕರಣದಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೀಡಾದವರನ್ನು ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಚೌಕುಡಿ ಬೆಟ್ಟು ನೆರಂಬಳ್ಳಿ ನಿವಾಸಿ ವಿನಯ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಮಾ.28ರಂದು ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎ.4ರಂದು ಬೆಳಗ್ಗೆ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿ ವರಾಹಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿತ್ತು.
ಈ ಸಾವಿನ ಬಗ್ಗೆ ವಿನಯ್ ಮಾವ ಶೀನ ಪೂಜಾರಿ ಸಂಶಯ ಇರುವುದಾಗಿ ಎ.4ರಂದು ದೂರು ನೀಡಿದ್ದು ಅದರಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಭಾವಿಕ ಮರಣ) ಪ್ರಕರಣ ದಾಖ ಲಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಿನಯ್ ಅವರ ಕುತ್ತಿಗೆ ಭಾಗವನ್ನು ಬಲವಾಗಿ ಒತ್ತಿರುವುದರಿಂದ ಸಾವು ಸಂಬಂವಿಸಿದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ವಿನಯನನ್ನು ಆತನ ಸ್ನೇಹಿತನಾದ ಹುಣ್ಸೆಕಟ್ಟೆ ಹೊಸತೊಪ್ಪಲುವಿನ ಅಕ್ಷಯ ಮಾ.28ರಂದು ಮನೆಯ ಬಳಿಯಿಂದ ಕರೆದುಕೊಂಡು ಹೋಗಿದ್ದು, ಅಕ್ಷಯ ಹಾಗೂ ಆತನ ಸ್ನೇಹಿತರು ಸೇರಿ ವಿನಯ್ ಕುತ್ತಿಗೆ ಭಾಗಕ್ಕೆ ಬಲವಾಗಿ ಹಿಚುಕಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಕ್ಷಯ್ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಯಿದ್ದು, ಶಂಕರ ನಾರಾಯಣ ಠಾಣೆಗೆ ಪೊಲೀಸ್ ಆಧಿಕಾರಿಗಳು ಭೇಟಿ ನೀಡಿದ್ದಾರೆ.







