ಬ್ರಿಟನ್ ನೂತನ ಪ್ರಧಾನಿ ಟ್ರಸ್ ಸಂಪುಟದಲ್ಲಿ ಇಬ್ಬರು ಭಾರತೀಯ ಮೂಲದ ಸಚಿವರು

photo : NDTV
ಲಂಡನ್, ಸೆ.7: ಬ್ರಿಟನ್ನ ನೂತನ ಪ್ರಧಾನಿ ಲಿಸ್ ಟ್ರಸ್ ಅವರ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಸುಯೆಲ್ಲಾ ಬ್ರೆವೆರ್ಮನ್ ಹಾಗೂ ಅಲೋಕ್ ಶರ್ಮ ಸ್ಥಾನ ಪಡೆದಿದ್ದಾರೆ.
47 ವರ್ಷದ ಸುಯೆಲ್ಲಾ ಬ್ರೆವರ್ಮನ್ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಪ್ರೀತಿ ಪಟೇಲ್ ಸ್ಥಾನದಲ್ಲಿ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಟ್ರಸ್ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಗೃಹ ಇಲಾಖೆಯ ಹುದ್ದೆಗೆ ಪ್ರೀತಿ ಪಟೇಲ್ ರಾಜೀನಾಮೆ ಸಲ್ಲಿಸಿದ್ದರು.
ಭಾರತೀಯ ಮೂಲದ ಮತ್ತೊಬ್ಬ ಸಂಸದ, ಅಲೋಕ್ ಶರ್ಮ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ ಸಿಒಪಿ26ರ ಅಧ್ಯಕ್ಷ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ. ಕಳೆದ ನವೆಂಬರ್ನಲ್ಲಿ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋದಲ್ಲಿ ನಡೆದಿದ್ದ ಸಿಒಪಿ26 ಸಮಾವೇಶದಲ್ಲಿ ಅಧ್ಯಕ್ಷರಾಗಿ ಅವರು ಶ್ಲಾಘನೀಯವಾಗಿ ಕಾರ್ಯನಿರ್ವಹಿಸಿದ್ದರು. ಪ್ರಧಾನಿ ಲಿಜ್ ಟ್ರಸ್ ಅವರೊಂದಿಗೆ ಕೆಲಸ ಮುಂದುವರಿಸಲು ಹರ್ಷವಾಗುತ್ತಿದೆ. ಗ್ಲಾಸ್ಗೊ ಹವಾಮಾನ ಒಪ್ಪಂದದ ಅಂಶವನ್ನು ಕಾರ್ಯಗತಗೊಳಿಸಲು ಆದ್ಯತೆ ನೀಡುತ್ತೇನೆ ಎಂದು ಆಗ್ರಾ ಮೂಲದ ಅಲೋಕ್ ಶರ್ಮ ಹೇಳಿದ್ದಾರೆ.





