ಹಾಲಂಡ್ನ ನಗರದಲ್ಲಿ ಮಾಂಸದ ಜಾಹೀರಾತು ನಿಷೇಧ: ಕಾರಣವೇನು ಗೊತ್ತೇ ?

photo:hindustan times
ಆಮ್ಸ್ಟರ್ಡಾಂ, ಸೆ.7: ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಮತ್ತು ಹವಾಮಾನ ಬದಲಾವಣೆ ಸಮಸ್ಯೆಯನ್ನು ಎದುರಿಸುವ ಕಾರ್ಯತಂತ್ರದ ಭಾಗವಾಗಿ ನೆದರ್ಲ್ಯಾಂಡ್ನ ನಗರವೊಂದು ಮಾಂಸದ ಬಗ್ಗೆ ಜಾಹೀರಾತನ್ನು ನಿಷೇಧಿಸಿದ್ದು ಹೀಗೆ ಮಾಡಿದ ವಿಶ್ವದ ಪ್ರಥಮ ನಗರವಾಗಿ ಗುರುತಿಸಿಕೊಂಡಿದೆ.
ಹಾಲಂಡ್ನ ಹಾರ್ಲೆಮ್ ನಗರವು ಮಾಂಸದ ಸೇವನೆಯನ್ನು ಕಡಿಮೆಗೊಳಿಸಿ, ಈ ಮೂಲಕ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮಾಂಸದ ಕುರಿತ ಜಾಹೀರಾತನ್ನು ನಿಷೇಧಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ರಾಜಧಾನಿ ಆಮ್ಸ್ಟರ್ಡಾಂ ಸಮೀಪದ ಹಾರ್ಲೆಮ್ ನಗರದಲ್ಲಿ ಸುಮಾರು 1,60,000 ಜನರಿದ್ದು 2024ರ ಜನವರಿಯಿಂದ ಮಾಂಸದ ಜಾಹೀರಾತಿಗೆ ನಿಷೇಧ ಜಾರಿಗೆ ಬರಲಿದೆ. ಸುಸ್ಥಿರ ಮಾಂಸದ ಜಾಹೀರಾತಿಗೂ ಈ ನಿಷೇಧ ಅನ್ವಯಿಸುತ್ತದೆಯೇ ಎಂಬ ಬಗ್ಗೆ ಸ್ಥಳೀಯ ಆಡಳಿತ ಇನ್ನೂ ನಿರ್ಧರಿಸಿಲ್ಲ ಎಂದು ವರದಿ ಹೇಳಿದೆ.
ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಹಸಿರು ಮನೆ ಹೊರಸೂಸುವಿಕೆಯ ಒಟ್ಟು ಪ್ರಮಾಣದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಾಂಸ ಸೇವನೆ ಮತ್ತು ಉತ್ಪಾದನೆ ಕಾರಣವಾಗಿದೆ ಎಂಬ ಇತ್ತೀಚಿನ ಸಂಶೋಧನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಫಲಕಗಳು, ಬಸ್ಸುಗಳು ಮತ್ತು ವಾಹನ, ರೈಲು ನಿಲ್ದಾಣಗಳಿಂದ ಮಾಂಸದ ಜಾಹೀರಾತನ್ನು ತೆಗೆದು ಹಾಕುವ, ಜಾಹೀರಾತನ್ನು ನಿಷೇಧಿಸುವ ನಿರ್ಧಾರವನ್ನು ವಿರೋಧಿಸುವುದಾಗಿ ಸ್ಥಳೀಯ ಮಾಂಸ ಮಾರಾಟಗಾರರ ಸಂಘಟನೆ ಹೇಳಿದೆ.







