ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆಗೆ ಖಂಡನೆ; ಡಿವೈಎಫ್‌ಐ, ಜೆಎಂಎಸ್, ಎಸ್‌ಎಫ್‌ಐ, ಡಿಎಚ್‌ಎಸ್ ಪ್ರತಿಭಟನೆ
ಮುರುಘಾ ಮಠದ ಶಿವಮೂರ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು, ಸೆ.7: ಗುಜರಾತ್‌ನ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳ ಬಿಡುಗಡೆಯನ್ನು ವಿರೋಧಿಸಿ ಮತ್ತು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಮುರುಘಾ ಮಠದ ಶಿವಮೂರ್ತಿಯ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್‌ಐ, ಜೆಎಂಎಸ್, ಎಸ್‌ಎಫ್‌ಐ, ಡಿಎಚ್‌ಎಸ್ ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಬುದವಾರ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ದೇಶದಲ್ಲಿ ಬಿಜೆಪಿ ಸರಕಾರ ಆಳ್ವಿಕೆಗೆ ಬಂದ ಬಳಿಕ ದೇಶದ ಕಾನೂನು ಸ್ಥಿತಿಯು ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಆರ್‌ಎಸ್‌ಎಸ್ ನೀತಿಗಳಿಂದ ನ್ಯಾಯಾಂಗವನ್ನು ಬುಡಮೇಲು ಮಾಡಲಾಗುತ್ತಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ ಗುಜರಾತ್‌ನಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿರುವ ಆರೋಪಿಗಳನ್ನು ಕೇಂದ್ರ ಸರಕಾರದ ಕೃಪಾಕಟಾಕ್ಷದಲ್ಲಿ ಬಿಡುಗಡೆಗೊಳಿಸಲಾಗಿದೆ. ರಾಜ್ಯದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮುರುಘಾ ಮಠದ ಶಿವಮೂರ್ತಿಯ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ಸರಕಾರ ಹಿಂದೇಟು ಹಾಕುತ್ತಿವೆ. ಕೊಲೆಗಡುಕರು, ಅತ್ಯಾಚಾರಿಗಳನ್ನು ಬೆಂಬಲಿಸುವ ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಗೂ ಭಯೋತ್ಪಾದಕ ಐಸಿಸ್ ಸಂಘಟನೆಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.
ಡಿವೈಎಫ್‌ಐ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಗತಿಪರ ಸಂಘಟನೆಯ ಮುಖಂಡರಾದ ಡಾ.ಕೃಷ್ಣಪ್ಪ ಕೊಂಚಾಡಿ, ‘ಸಾಮರಸ್ಯ ಮಂಗಳೂರು’ ಇದರ ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು.
ಈ ವೇಳೆ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿನಿತ್ ದೇವಾಡಿಗ, ಕಾರ್ಯದರ್ಶಿ ರೇವಂತ್ ಕದ್ರಿ, ಜನವಾದಿ ಮಹಿಳಾ ಸಂಘಟನೆಯ ಜಯಲಕ್ಷ್ಮಿ ಜಪ್ಪಿನಮೊಗರು, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ, ತಿಮ್ಮಯ್ಯ ಕೊಂಚಾಡಿ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಸುಕುಮಾರ್ ತೊಕ್ಕೊಟ್ಟು, ಸಮುದಾಯ ಸಂಘಟನೆಯ ಮುಖಂಡರಾದ ವಾಸುದೇವ ಉಚ್ಚಿಲ, ಅಖಿಲ ಭಾರತ ವಕೀಲರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಕುತ್ತಾರ್, ಬೀದಿ ಬದಿ ಸಂಘಟನೆಯ ಮುಸ್ತಫಾ, ಹಮಾಲಿ ಕಾರ್ಮಿಕ ಸಂಘಟನೆಯ ವಿಲ್ಲಿ ವಿಲ್ಸನ್, ಪಲ್ಗುಣಿ ಮೀನುಗಾರರ ಸಂಘಟನೆಯ ತಯ್ಯೂಬ್ ಬೆಂಗರೆ, ಮಹಿಳಾ ಸಂಘಟನೆಯ ಮುಖಂಡ ರಾದ ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಅನುರಾಧ ಬಾಳಿಗಾ, ಸಮರ್ಥ್ ಭಟ್ ಉಪಸ್ಥಿತರಿದ್ದರು.






.jpeg)

.jpeg)

