ಗ್ರಾಮಗಳ ಗ್ರಂಥಾಲಯಗಳಿಂದ ಪ್ರೇರಣೆ ಮೂಡಬೇಕು: ಡಾ. ಕುಮಾರ್

ಮಂಗಳೂರು, ಸೆ.7: ಜಿಲ್ಲೆಯ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಗಳಿಂದ ಸ್ಥಳೀಯ ಗ್ರಾಮಸ್ಥರಿಗೆ ಪ್ರೇರಣೆ ಮೂಡಿಸುವ ಕೆಲಸವಾಗಬೇಕು ಎಂದು ದ.ಕ.ಜಿಪಂ ಸಿಇಒ ಡಾ.ಕುಮಾರ್ ಹೇಳಿದರು.
ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿರುವ ಗ್ರಂಥಾಲಯಗಳು ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲಿನ ಮೆಲ್ವಿಚಾರಕರು ಜವಾಬ್ದಾರಿ, ಹೊಣೆಗಾರಿಕೆ ಹಾಗೂ ಅಭಿರುಚಿಯಿಂದ ಕೆಲಸ ಮಾಡಬೇಕು. ಗ್ರಂಥಾಲಯಗಳು ಜ್ಞಾನ ದೇಗುಲಗಳು, ಜ್ಞ್ಞಾನವೇ ದೇವರು. ಅಲ್ಲಿರುವವರು ಸಕಾರಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ. ಈ ವೃತ್ತಿಯನ್ನು ಗೌರವಿಸಿ ಗ್ರಂಥಾಲಯಕ್ಕೆ ಬರುವ ಓದುಗರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಡಾ.ಕುಮಾರ್ ಹೇಳಿದರು.
ಮೇಲ್ವಿಚಾರಕರು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಹಾಗೂ ಅಪರಾಹ್ನ 3ರಿಂದ ಸಂಜೆ 5ರವರೆಗೆ ಗ್ರಂಥಾಲಯಗಳನ್ನು ತೆರೆಯಬೇಕು, ಗ್ರಾಮ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಶಾಲೆ, ಕಾಲೇಜು ವಿದ್ಯಾರ್ಥಿಗಳ ಪಟ್ಟಿಯನ್ನಿಟ್ಟುಕೊಳ್ಳಬೇಕು, ಗ್ರಾಮದ ಪ್ರತಿ ಕುಟುಂಬದ ಒಬ್ಬರನ್ನಾದರು ಗ್ರಂಥಾಲಯದ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು. ಡಿಜಿಟಲ್ ಲೈಬ್ರರಿಗಳು ಕ್ರಿಯಾಶೀಲತೆಯಿಂದ ಕೂಡಿರಬೇಕು, 8,9,10ನೇ ತರಗತಿಗಳು ಮತ್ತು ಪಿಯುಸಿ ಹಾಗೂ ಪದವಿ ಕಾಲೇಜುಗಳ ಪಠ್ಯ ಪುಸ್ತಕಗಳ ಪಿಡಿಎಫ್ ಕಾಪಿಗಳನ್ನು ಪೆನ್‌ಡ್ರೈವ್ ನಲ್ಲಿ ವಿದ್ಯಾರ್ಥಿಗಳು ಪಡೆಯುವಂತಿರಬೇಕು, ಗ್ರಂಥಮಿತ್ರ ಯೋಜನೆಯನ್ನು ಸಮಪರ್ಕವಾಗಿ ಅಳವಡಿಸಿಕೊಳ್ಳ ಬೇಕು ಎಂದು ಡಾ. ಕುಮಾರ್ ಸಲಹೆ ನೀಡಿದರು.
ಸಭೆಯಲ್ಲಿ ಮುಖ್ಯಗ್ರಂಥಾಲಯಾಧಿಕಾರಿ ಗಾಯತ್ರಿ, ಶಿಕ್ಷಣ ಫೌಂಡೇಶನ್‌ನ ಸಂಯೋಜಕ ರಕ್ಷಿತ್ ಮತ್ತಿತರರು ಪಾಲ್ಗೊಂಡಿದ್ದರು.







