ಬಂಟ್ವಾಳ; ರಿಯಾಝ್ ಫರಂಗಿಪೇಟೆ ಮನೆಯಲ್ಲಿ ಎನ್.ಐ.ಎ. ಪರಿಶೀಲನೆ
ಬಿಹಾರದಲ್ಲಿ ನಡೆದ ಪ್ರಕರಣ

ಬಂಟ್ವಾಳ, ಸೆ.8: ಬಿಹಾರದಲ್ಲಿ ಜುಲೈ ತಿಂಗಳಲ್ಲಿ ನಡೆದ ಪ್ರಕರಣ ಒಂದರ ಸಂಬಂಧ ರಾಷ್ಟ್ರೀಯ ತನಿಖಾ ತಂಡ (ಎನ್.ಐ.ಎ)ದ ಅಧಿಕಾರಿಗಳು ತಾಲೂಕಿನ ಬಿ.ಸಿ.ರೋಡ್ ಸಮೀಪದ ಪರ್ಲ್ಯ ಎಂಬಲ್ಲಿರುವ ಎಸ್.ಡಿ.ಪಿ.ಐ. ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರ ಮನೆಯಲ್ಲಿ ಗುರುವಾರ ಪರಿಶೀಲನೆ ನಡೆಸಿದರು.
ಬೆಳಗ್ಗೆ 5 ಗಂಟೆ ಸುಮಾರಿಗೆ ರಿಯಾಝ್ ಅವರ ಮನೆಗೆ ಬಂದ ಒಂಭತ್ತು ಮಂದಿ ಇದ್ದ ಎನ್.ಐ.ಎ. ಅಧಿಕಾರಿಗಳು ಮಧ್ಯಾಹ್ನ 1:30ರ ವರೆಗೆ ಪರಿಶೀಲನೆ ನಡೆಸಿದರು. ಬಳಿಕ ಎರಡು ಮೊಬೈಲ್ ಫೋನ್, ಪಕ್ಷಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು, ಪಕ್ಷದ ಟಿ ಶರ್ಟ್ ಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.
ಬಿಹಾರದಲ್ಲಿ ನಡೆದ ಪ್ರಕರಣ ಒಂದಕ್ಕೆ ಸಂಬಂಧಿಸಿ ಪಟ್ಣ ಜಿಲ್ಲೆಯ ಎಸ್.ಡಿ.ಪಿ.ಐ. ಕಾರ್ಯದರ್ಶಿ ಸಹಿತ ಕೆಲವರನ್ನು ಎನ್.ಐ.ಎ. ಬಂಧಿಸಿದೆ. ರಿಯಾಝ್ ಬಿಹಾರ ರಾಜ್ಯದ ಪಕ್ಷದ ಉಸ್ತುವಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ರಿಯಾಝ್ ಅವರನ್ನು ಎನ್.ಐ.ಎ. ತಂಡ, ಅವರ ಮನೆಗೆ ತೆರಳಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಅವರನ್ನು ವಿಚಾರಣೆ ನಡೆಸಿದೆ.
ಈ ಬಗ್ಗೆ ಸ್ಥಳೀಯ ಪೊಲೀಸರು, ಎನ್.ಐ.ಎ. ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಧಿಕಾರಿಗಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿಯಾಝ್ ಫರಂಗಿಪೇಟೆ, ಬಿಹಾರದಲ್ಲಿ ಜುಲೈ ತಿಂಗಳಲ್ಲಿ ನಡೆದ ಒಂದು ಸುಳ್ಳು ಪ್ರಕರಣಕ್ಕೆ ಸಂಬಂಧಿಸಿ ಎನ್.ಐ.ಎ. ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಅವರ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಅವರು ಕೂಡಾ ಗೌರವದಿಂದ ಪರಿಶೀಲನೆ, ವಿಚಾರಣೆ ನಡೆಸಿ ತೆರಳಿದ್ದಾರೆ ಎಂದರು.
2014ರ ಬಳಿಕ ಎನ್.ಐ.ಎ. ಸಹಿತ ದೇಶದ ರಾಷ್ಟ್ರೀಯ ಎಲ್ಲಾ ತನಿಖಾ ಸಂಸ್ಥೆಗಳು ಬಿಜೆಪಿಯ ಪಂಜರದ ಗಿಣಿಯಾಗಿದೆ. ತನಿಖಾ ಸಂಸ್ಥೆಗಳು ಸಂವಿಧಾನದ ಪ್ರಕಾರ ನಡೆಯದೆ ಬಿ.ಜೆ.ಪಿ. ಮತ್ತು ಸಂಘ ಪರಿವಾರದ ಸಿದ್ಧಾಂತಕ್ಕೆ ತಕ್ಕಂತೆ ನಡೆಯುತ್ತಿದೆ. ಬಿಜೆಪಿ, ಸಂಘ ಪರಿವಾರ ಈ ದೇಶದಲ್ಲಿ ನಡೆಸಿದ, ನಡೆಸುತ್ತಿರುವ ಕಾನೂನು ಬಾಹಿರ ಕುಕೃತ್ಯಗಳ ತನಿಖೆ ನಡೆಸುವ ಬದಲು, ವಿರೋಧ ಪಕ್ಷಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದರು.
ಎನ್.ಐ.ಎ. ಅಧಿಕಾರಿಗಳು ನಮ್ಮ ಮನೆಯಿಂದ ಎರಡು ಮೊಬೈಲ್ ಫೋನ್, ಪಕ್ಷಕ್ಕೆ ಸಂಬಂಧಿಸಿದ ಹ್ಯಾಂಟ್ ಬಿಲ್, ಕೆಲವು ದಾಖಲೆ ಪತ್ರಗಳು, ಪಕ್ಷದ ಹೆಸರು ಇರುವ ಟಿ ಶರ್ಟ್ ವಶಕ್ಕೆ ಪಡೆದಿದ್ದಾರೆ. ಅದನ್ನು ಹೊರೆತು ಪಡಿಸಿ ಬೇರೆ ಯಾವುದೇ ಒಂದೇ ಒಂದು ವಸ್ತುವನ್ನು ವಶಕ್ಕೆ ಪಡೆದಿಲ್ಲ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಅವರನ್ನೇ ಅವರು ಸಮಾಧಾನ ಪಡಿಸಲು ಅವರೇ ಸೃಷ್ಟಿಸಿದ ಸುದ್ದಿಗಳಾಗಿವೆ ಎಂದರು.
ಎನ್.ಐ.ಎ. ಅಧಿಕಾರಿಗಳು ರಿಯಾಝ್ ಅವರ ಮನೆಗೆ ಬಂದ ವಿಷಯ ತಿಳಿದು ಪಕ್ಷದ ನೂರಾರು ಕಾರ್ಯಕರ್ತರು ಮನೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಎನ್.ಐ.ಎ. ಗೋ ಬ್ಲಾಕ್ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಸ್ಥಳದಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ಹೆಚ್ಚಿನ ಭದ್ರತೆ ಒದಗಿಸಲಾಯಿತು.