ಬೆಂಗಳೂರು: ಮೂರು ದಶಕಗಳಿಂದ ಒಣಗಿದ್ದ ನದಿಯಲ್ಲೂ ಪ್ರವಾಹ!

ಬೆಂಗಳೂರು: ಮೂರು ದಶಕಗಳಿಂದ ಒಣಗಿದ್ದ ದಕ್ಷಿಣ ಪಿನಾಕಿನಿ ನದಿಯನ್ನು "ಮೃತ ನದಿ" ಎಂದೇ ಪರಿಗಣಿಸಲಾಗಿತ್ತು. ಆದರೆ ವ್ಯಾಪಕ ಮಳೆ ಕಾರಣದಿಂದ ಅದು ಮತ್ತೆ ಜೀವ ಪಡೆದು ತನ್ನ ಎಲ್ಲೆ ಮೀರಿ ಹರಿದ ಪರಿಣಾಮ ಬುಧವಾರ ಚನ್ನಸಂದ್ರ ಮುಖ್ಯರಸ್ತೆ ಹಲವು ಕಡೆಗಳಲ್ಲಿ ಮುಚ್ಚಿದೆ. ಬೆಂಗಳೂರಿನ ಟೆಕ್ ಕಾರಿಡಾರ್‍ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನಾಲ್ಕಡಿ ನೆರೆ ನೀರು ಹರಿಯುತ್ತಿದೆ.
ನದಿಯ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತುಂಬಿ ಹರಿಯುತ್ತಿದೆ. ಕಳೆದ ವಾರಾಂತ್ಯದಿಂದ ಸುರಿಯುತ್ತಿರುವ ಧಾರಾಕಾರ ಮಳೆ, ಐಷಾರಾಮಿ ವಸತಿ ಕಾಲನಿಗಳು ಸೇರಿದಂತೆ ಬೆಂಗಳೂರಿನ ಹಲವು ಕಡೆಗಳಲ್ಲಿ ಆವಾಂತರ ಸೃಷ್ಟಿಸಿದೆ.
ಈ ಜಲಪ್ರಳಯ ಸ್ಥಿತಿಯಿಂದಾಗಿ ವೈಟ್‍ಫೀಲ್ಡ್‌ನ ಹೋಪ್ ಫಾರ್ಮ್ ಜಂಕ್ಷನ್‍ನಿಂದ ಹೊಸಕೋಟೆ ಮತ್ತು ಮಾಲೂರನ್ನು ಸಂಪರ್ಕಿಸುವ ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ರಸ್ತೆ ಮೂಲಕ ನಗರಕ್ಕೆ ಪ್ರತಿದಿನ ತರಕಾರಿ ಹಾಗೂ ಇಂಧನ ಪೂರೈಕೆಯಾಗುತ್ತಿತ್ತು.
"ನದಿ ಈ ರೀತಿ ಹರಿದಿರುವುದನ್ನು ನಾವು 30 ವರ್ಷಗಳಿಂದ ನೋಡಿಲ್ಲ. ಇದು ಅಪಾಯಕಾರಿ. ಸ್ಥಳೀಯ ಪೊಲೀಸರು ಮತ್ತು ಗ್ರಾಮಪಂಚಾಯ್ತಿ ಸದಸ್ಯರು ದ್ವಿಚಕ್ರವಾಹನ ಹಾಗೂ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ" ಎಂದು ಬೋಧನಹೊಸಹಳ್ಳಿಯ ನಿವಾಸಿ ಸೊನ್ನೇಗೌಡ ಹೇಳುತ್ತಾರೆ.
ನೀರಿನ ಮಟ್ಟ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದ ಟ್ರಕ್ ಹಾಗೂ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು timesofindia.com ವರದಿ ಮಾಡಿದೆ.







