Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪೂಚಂತೇ ಗ್ರೇಟ್ ಯಾಕಂತೆ?

ಪೂಚಂತೇ ಗ್ರೇಟ್ ಯಾಕಂತೆ?

ಇಂದು ಪೂರ್ಣಚಂದ್ರ ತೇಜಸ್ವಿ ಜನ್ಮದಿನ

ನಾಗೇಶ ಹೆಗಡೆನಾಗೇಶ ಹೆಗಡೆ8 Sept 2022 10:37 AM IST
share
ಪೂಚಂತೇ ಗ್ರೇಟ್ ಯಾಕಂತೆ?

ಕಳೆದ ಏಳೆಂಟು ವರ್ಷಗಳಿಂದ ಪ್ರತೀ ಸೆಪ್ಟಂಬರ್ 8ರಂದು, ಅಂದರೆ ತೇಜಸ್ವಿಯವರ ಜನ್ಮದಿನದ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಗೆಳೆಯರು ಒಂದು ವಿಶಿಷ್ಟ ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತ ಬಂದಿದ್ದಾರೆ. ಆ ಸಂದರ್ಭಕ್ಕೆ ಅಂತ ಪ್ರತೀವರ್ಷ ನನ್ನಿಂದ ಒಂದು ಕಿರುಪುಸ್ತಕವನ್ನು ಬರೆಸಿದ್ದಾರೆ. ಅವೆಲ್ಲವೂ ತೇಜಸ್ವಿ ಕಂಡ ಜೀವಲೋಕದ ಕುರಿತ ಚಿಕ್ಕ ಚಿಕ್ಕ ಪುಸ್ತಕ. ಒಂದು ವರ್ಷ ಕೀಟಲೋಕ, ಆರ್ಕಿಡ್ ಲೋಕ, ಇನ್ನೊಂದು ವರ್ಷ ಪಕ್ಷಿಲೋಕ, ಮತ್ತೊಂದು ವರ್ಷ ಹೂಗಳ ಲೋಕ, ಪರಾಗಸ್ಪರ್ಶಿಗಳ ಲೋಕ, ಜೇಡಲೋಕ ಹೀಗೆ... ತೇಜಸ್ವಿ ಚರ್ಚಿಸಿದ ವಿಷಯವನ್ನೇ ತುಸು ವಿಸ್ತರಿಸುವುದು. ಲೇಟೆಸ್ಟ್ ಮಾಹಿತಿಯನ್ನು ಸೇರಿಸುವುದು. ಅಷ್ಟೇ ಅಲ್ಲ, ಆಯಾ ವಿಷಯದ ಬಗ್ಗೆ ನೇಚರ್ ಫೋಟೊಗ್ರಾಫರ್‌ಗಳಿಂದ ಚಂದದ ಫೋಟೊಗಳನ್ನೂ ತರಿಸಿ, ಚಿತ್ರಕಲಾ ಪರಿಷತ್ತಿನಲ್ಲಿ ವಾರವಿಡೀ ಪ್ರದರ್ಶನ ಮಾಡುವುದು. ಈ ವರ್ಷ ತೇಜಸ್ವಿಯವರ ಆಸಕ್ತಿಯ ಮಂಡೂಕ ಲೋಕದ ಬಗ್ಗೆ ಅಂಥದೇ ಕಾರ್ಯಕ್ರಮ ಇದೆ. ತೇಜಸ್ವಿ ಒಬ್ಬ ಸಾಹಿತಿಯಾಗಿ, ಫೋಟೊಗ್ರಾಫರ್ ಆಗಿ, ಮಲೆನಾಡಿನ ಹಸಿರಿನ ಲೋಕದ ವಕ್ತಾರರಾಗಿ ನಮ್ಮೆಲ್ಲರ ಕನ್ನಡಪ್ರಜ್ಞೆಯನ್ನು ಶ್ರೀಮಂತಗೊಳಿಸಿದ್ದಾರೆ. ಕಾಡನ್ನು ಸುತ್ತಲು ಅವರು ಸಾವಿರಾರು ಯುವಕಯುವತಿಯರಿಗೆ ಪ್ರೇರಣೆ ಕೊಟ್ಟಿದ್ದಾರೆ. ಸಾಹಿತ್ಯ ಕೃತಿಗಳ ಮೂಲಕ ನಿಸರ್ಗದ ಅನ್ವೇಷಣೆ ಮಾಡಲು ಹಚ್ಚಿದ ಕೀರ್ತಿ ತೇಜಸ್ವಿಯವರದ್ದು. ಈಗ ಕೊಟ್ಟಿಗೆಹಾರದಲ್ಲಿ ತೇಜಸ್ವಿ ಹೆಸರಿನಲ್ಲಿ ಒಂದು ಮ್ಯೂಸಿಯಂ, ಒಂದು ಚಾರಣ ಕೇಂದ್ರ ಕೂಡ ಸ್ಥಾಪನೆ ರೂಪುಗೊಳ್ಳುತ್ತಾ ಇದೆ. ಬಾಲ್ಯದಲ್ಲಿ ವಿಜ್ಞಾನದ ಕಪೋಲ ಕಲ್ಪಿತ ಕಥನಗಳನ್ನು (ಸೈನ್ಸ್‌ಫಿಕ್ಷನ್) ಓದಿ ಅದೇ ಗುಂಗಿನಲ್ಲಿ ರೊಬೊಟಿಕ್ಸ್ ತಂತ್ರಜ್ಞಾನ, ಖಗೋಲವಿಜ್ಞಾನವನ್ನೇ ವೃತ್ತಿಯಾಗಿಸಿಕೊಂಡವರು ನನಗೆ ಗೊತ್ತು. ಇಂಜಿನಿಯರ್‌ಗಳು ಗೊತ್ತು. ಹಾಗೆ ಹೊಸತನ್ನು ಕಲಿತ ಎಲ್ಲರೂ ವಿಜ್ಞಾನವನ್ನು ನಗರದ ಕಡೆ, ಕ್ಯಾಲಿಫೋರ್ನಿಯಾ ಕಡೆ, ಆಚಿನ ಲೋಕದ ಕಡೆ ಮುಂದಕ್ಕೆ ಸಾಗಿಸುತ್ತಿದ್ದಾರೆ. ಆದರೆ ಕಾಡಿನ ಕಡೆ, ಜೀವಲೋಕದ ಕಡೆ ಒಂದು ಹೊಸ ಪೀಳಿಗೆಯನ್ನು ಸೆಳೆಯುವುದು ಇವೆಲ್ಲಕ್ಕಿಂತ ಮಹತ್ವದ್ದು, ಯಾಕಂದರೆ, ಮನುಷ್ಯನ ಅಭಿವೃದ್ಧಿಯ ಹಪಾಹಪಿಯಿಂದಾಗಿ ಪ್ರಕೃತಿ ತುಂಬ ದುಃಸ್ಥಿತಿಯ ಕಡೆ ಹೋಗುತ್ತಾ ಇದೆ. ಅದು ಅನಾಥ ಆಗುತ್ತಾ ಇದೆ. ನಮಗೆ ಆಚಿನ ಬ್ರಹ್ಮಾಂಡದ ನಕ್ಷತ್ರಗಳನ್ನು ಎಣಿಸೋದು ಗೊತ್ತೇ ವಿನಾ, ಕಾಡಿನ ಒಂದೆಕರೆಯಲ್ಲಿ ಎಷ್ಟು ಬಗೆಯ ಜೀವಿಗಳು ವಾಸ ಮಾಡುತ್ತವೆ ಅನ್ನೋದರ ಬಗ್ಗೆ ಲಕ್ಷ ಇಲ್ಲ. ಕಾಡಿನ ವಿದ್ಯಮಾನಗಳ ಬಗ್ಗೆ ಗೊತ್ತೇ ಇಲ್ಲದವರು ವಿದ್ಯುತ್ತಿಗಾಗಿ ಕಾಡನ್ನು ಮುಳುಗಿಸುತ್ತಾರೆ; ಗ್ರಾನೈಟಿಗಾಗಿ ಡೈನಮೈಟ್ ಸ್ಫೋಟಿಸುತ್ತಾರೆ. ಮರಳಿಗಾಗಿ ಹಳ್ಳಕೊಳ್ಳಗಳನ್ನು ಬಾಚುತ್ತಾರೆ. ಇಂಥ ನಿರಂತರ ದಾಳಿಯಿಂದ ಪ್ರಕೃತಿಯ ಗತಿ ಏನಾಗಬೇಕು? ಮಲೆನಾಡಿನ ದಟ್ಟ ಜೀವಭಂಡಾರದ ಮಧ್ಯೆ ಇಂಥ ಅನಾಹುತಗಳು ನಡೆದರೆ ಅಲ್ಲಿನ ಅಪರೂಪದ ಜೀವಿಯೇ ನಿರ್ವಂಶವಾಗಬಹುದು. ಪೃಥ್ವಿಯ ಬೇರೆಲ್ಲೂ ಕಾಣದ ಅಪರೂಪದ ಜೀವಿಗಳು, ನಾಳಿನ ಭವಿಷ್ಯಕ್ಕೆ ಉತ್ತಮ ಔಷಧವೋ ಔದ್ಯಮಿಕ ತೈಲವೋ ಆಗಬಹುದಾದ ಜೀವಸಂಪತ್ತು ಶಾಶ್ವತವಾಗಿ ಕಣ್ಮರೆ ಆಗಬಹುದು. ಆಗ್ತಾ ಇವೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು ತಾನೆ? ಪೂಚಂತೇ ಆ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ. ತೇಜಸ್ವಿಯವರ ಬಹುತೇಕ ಎಲ್ಲ ಸಾಹಿತ್ಯ ಕೃತಿಗಳಲ್ಲೂ ನಿಸರ್ಗ ಹಾಸುಹೊಕ್ಕಾಗಿ ಬರುತ್ತದೆ. ಅನೇಕ ಬಾರಿ ಅದು ಕಾದಂಬರಿಯೋ, ಕತೆಯೋ, ಪ್ರಬಂಧವೋ, ಪ್ರಹಸನವೋ ಗೊತ್ತಾಗುವುದೇ ಇಲ್ಲ. ಪರಿಸರದ ಕತೆ, ಕಾಡಿನ ಕತೆಗಳು, ಕರ್ವಾಲೊ, ಕಿರಿಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ ಇಲ್ಲೆಲ್ಲ ನೇರವಾಗಿ ಪರಿಸರದ ಘಟಕಗಳೇ ಮುಖ್ಯ ಪಾತ್ರಧಾರಿ. ಅದೆಷ್ಟೋ ಬಾರಿ ಇವರ ಸಾಹಿತ್ಯವನ್ನು ‘‘ಯಾವ ವರ್ಗಕ್ಕೆ ಸೇರಿಸಬೇಕು ಅಂತಾನೇ ಗೊತ್ತಾಗ್ತಾ ಇಲ್ಲ’’ ಅಂತ ಕರ್ನಾಟಕ ಸಾಹಿತ್ಯ ಅಕಾಡಮಿಯ ಪದಾಧಿಕಾರಿಗಳು ಅವರೆದುರೇ ಪೇಚಾಡಿಕೊಂಡಿದ್ದರಂತೆ. ಅವರಿಗೆ ಏಳು ಬಾರಿ ಪುಸ್ತಕ ಬಹುಮಾನ ಬಂದಿದೆ (ಈಗ ಯಾರೂ ಅಂಥ ಸಾಧನೆ ಮಾಡುವಂತಿಲ್ಲ. ಗರಿಷ್ಠ ಮೂರು ಬಾರಿ ಮಾತ್ರ ಪುಸ್ತಕ ಬಹುಮಾನ ಪಡೆಯಬಹುದು ಅನ್ನೋ ನಿಯಮ ಜಾರಿಗೆ ಬಂದಿದೆ; ಮೂರು ಬಹುಮಾನ ಗೆದ್ದ ನಂತರ ಅವರು ಸ್ಪರ್ಧೆಗೆ ಬರುವಂತೆಯೇ ಇಲ್ಲ. ನನಗೂ ಆ ಅನರ್ಹ ಪಟ್ಟ ಸಿಕ್ಕಿದೆ). ಪೂಚಂತೇಯವರ ಸಾಹಿತ್ಯ ರಚನೆ ಕೂಡ ಕಾಡಿನಂತೆಯೇ ಇರುತ್ತವೆ. ನಾವು ಕಾಡಿನಲ್ಲಿ ಹೋಗುವಾಗ ಗಿಡ, ಮರ, ಬಳ್ಳಿ, ಪೊದೆ, ಹುಲ್ಲು, ನೀರು, ಪಕ್ಷಿ, ಜೇಡ, ಹಾವುರಾಣಿ ಎಲ್ಲ ಸಹಜೀವನ ನಡೆಸುವುದನ್ನು ಗಮನಿಸುತ್ತೇವೆ. ಗಿಡಗಳೇ ಒಂದು ಕಡೆ, ಪೊದೆಗಳೇ ಒಂದು ಕಡೆ, ಪಕ್ಷಿಗಳೇ ಒಂದು ಕಡೆ ಹೀಗೆ ಇರೋದಿಲ್ಲ. ಸಾಹಿತ್ಯ ಕೃತಿಗಳಲ್ಲಿ ಕಥಾಸಾಹಿತ್ಯ, ಕಾದಂಬರಿ, ಅದರಲ್ಲೂ ಪತ್ತೆದಾರಿ, ಐತಿಹಾಸಿಕ, ಆತ್ಮಕಥೆ, ಪ್ರವಾಸಕಥನ ಹೀಗೇ ಇರುತ್ತದಲ್ಲ. ಕಾಡಿನಲ್ಲಿ ಹಾಗೇನಿಲ್ಲ. ಅದಕ್ಕೇ ತೇಜಸ್ವಿ ಒಂದು ಕಡೆ ಹೇಳ್ತಾರೆ: ‘ಸಾಹಿತ್ಯದಲ್ಲಿ ಗದ್ಯ ಮತ್ತು ಪದ್ಯ ಅಂತ ಎರಡೇ ಕೆಟೆಗರಿ ಇರಬೇಕು’ ಅಂತ. ಅವರ ಕಥನ ಎಂದರೆ ಅದೆಂಥ ರೋಚಕ ರಸಪಾಕ ಅನ್ನುವುದನ್ನು ನೋಡುವುದಕ್ಕೆ ‘ಕರ್ವಾಲೊ’ ಕಾದಂಬರಿಯ ಕೊನೆಯ ಭಾಗದಲ್ಲಿ ಬರುವ ಒಂದು ಘಟನೆಯನ್ನು ನೋಡಬೇಕು. ಹಾರುವ ಓತಿಯನ್ನು ಹುಡುಕಲೇಬೇಕು ಅಂತ ಇಡೀ ತಂಡ (ಅಂದರೆ ಮಂದಣ್ಣ, ವಿಜ್ಞಾನಿ ಕರ್ವಾಲೊ, ಯಂಕ್ಟ, ಫೋಟೊಗ್ರಾಫರ್ ಪ್ರಭಾಕರ ಮತ್ತು ಬಿರಿಯಾನಿ ಕರಿಯಪ್ಪ) ಹೋಗಿರುತ್ತದೆ. ಹಸಿವೆ ಮತ್ತು ಸುಸ್ತಿನಿಂದಾಗಿ ಕಥಾನಾಯಕ ದಟ್ಟಕಾಡಿನಲ್ಲಿ ಸುಸ್ತಾಗಿ ಒಂದು ಬಂಡೆಗೆ ಒರಗಿ ಕೂತಿದ್ದಾಗ ಅವನ ಪಕ್ಕದ ತರಗೆಲೆಯ ಮೇಲೆ ಪಟ್‌ಪಟ್ ಅಂತ ಸದ್ದಾಗುತ್ತದೆ. ಮಳೆ ಬೀಳುವ ಸದ್ದು. ನೋಡಿದರೆ ಎತ್ತರದ ಮರದಿಂದ ಚಗುಳಿ (ಅಂದರೆ ಕೆಂಜಿಗ) ಬೀಳ್ತಾ ಇರ್ತವೆ. ಕಥಾನಾಯಕ ತಲೆ ಎತ್ತಿ ನೋಡಿದರೆ ಎತ್ತರದಲ್ಲಿ ಚಗುಳಿಗಳು ಕಟ್ಟಿಕೊಂಡ ಗೂಡಿನೊಳಗೆ ಓತಿಯೊಂದು ತಲೆ ಹಾಕಿ ಕೆಂಜಿಗನ್ನ ತಿನ್ತಾ ಇರ್ತದೆ. ನೋಡ್ತಾ ನೋಡ್ತಾ ಆ ಓತಿ ರೆಕ್ಕೆ ಬಿಡಿಸಿ ಪಕ್ಕದ ಮರಕ್ಕೆ ಹಾರ್ತದೆ. ನೋಡಿದವನಿಗೆ ವಿದ್ಯುದಾಘಾತ! ತಾನು ಇಷ್ಟು ವರ್ಷ ಧೇನಿಸುತ್ತಿದ್ದ ಗತಕಾಲದ ಜೀವಿಯ ಅನಿರೀಕ್ಷಿತ ದರ್ಶನ! ಅದು ಮತ್ತೆ ಕಣ್ಮರೆ ಆದೀತೆಂದು ದೃಷ್ಟಿಯನ್ನು ಅಲ್ಲೇ ಕೀಲಿಸಿ, ಆಚೀಚಿನವರನ್ನು ಕರೆಯುವಾಗಿನ ಆ ಉತ್ಕಟ ಕಾತರತೆ, ಅವರೆಲ್ಲ ಬಂದು ಒಂದರ ಮೇಲೊಂದರಂತೆ ಎಡವಟ್ಟು ಸಾಹಸಗಳನ್ನು ಮೆರೆಯುವುದು, ಲೇಖಕ ಆ ಜೀವಿಯನ್ನು ತದೇಕಚಿತ್ತದಿಂದ ನೋಡುತ್ತಿರುವಾಗಲೇ ಮಂದಣ್ಣ ಮತ್ತು ಕರ್ವಾಲೊ ಜೋಡಿ ಇವರ ಇಂಟರ್‌ವ್ಯೆ ಮಾಡುವುದು -ಹೀಗೆ ಮುಂದಿನ ಹತ್ತು ಪುಟಗಳಲ್ಲಿ ಸಾಹಿತ್ಯದ ನವರಸಗಳೂ ಜೊತೆಗೆ ತೇಜಸ್ವಿ ಬ್ರಾಂಡ್ ಮಸಾಲೆಗಳೂ ಮೇಳವಿಸುತ್ತವೆ. ಬರವಣಿಗೆಯ ಉತ್ತುಂಗ ಉತ್ಕಟತೆ ಹೇಗಿರಬೇಕು ಎಂಬುದಕ್ಕೆ ಇದು ಚೊಕ್ಕ ಉದಾಹರಣೆ. ಇಂಥ ಉದಾಹರಣೆಗಳು ಪೂಚಂತೇ ಕೃತಿಗಳಲ್ಲಿ ಮತ್ತೆ ಮತ್ತೆ ಬರುತ್ತವೆ. ಸೃಷ್ಟಿವೈಚಿತ್ರ್ಯಗಳ ತಲಸ್ಪರ್ಶಿ ಅಧ್ಯಯನದ ಜೊತೆ ನಿರೂಪಣೆಯ ಕಲಾತ್ಮಕತೆ ಮೇಳವಿಸಿದಾಗ ಇಂಥ ಮನತಟ್ಟುವ ಸಾಹಿತ್ಯಕೃತಿ ಸೃಷ್ಟಿಯಾಗುತ್ತದೆ. ತೇಜಸ್ವಿ ಒಂದು ಅನೌಪಚಾರಿಕ ವಿಶ್ವವಿದ್ಯಾನಿಲಯ ವೇ ಆಗಿದ್ದರು. ಅವರ ವಿಶೇಷತೆಯೇನೆಂದರೆ ನಿಸರ್ಗದ ಮಧ್ಯೆ ಇದ್ದು ಇಡೀ ಜಗತ್ತನ್ನು ನೋಡುತ್ತಿದ್ದರು. ನಿಸರ್ಗದ ನಡುವೆ ವಾಸಿಸುತ್ತಾ ತಮ್ಮ ಸುತ್ತಲಿನ ಜಲಚರಗಳು, ಸ್ತನಿಗಳಲ್ಲಿ ವಿಶಿಷ್ಟ ಬಾವಲಿಗಳು, ಜೇಡ ಮುಂತಾದ ಕೀಟಗಳನ್ನು ಅತ್ಯಂತ ಆಸಕ್ತಿಯಿಂದ ಗಮನಿಸುತ್ತಾ ಸಂಶೋಧಕ ದೃಷ್ಟಿಯಿಂದ ನೋಡಿದವರು. ಅವರೊಬ್ಬ ಪ್ರಜಾ-ವಿಜ್ಞಾನಿಯೇ (ಸಿಟಿಝನ್ ಸೈಂಟಿಸ್ಟ್) ಆಗಿದ್ದರು. ತನಗೆ ಗೊತ್ತಿಲ್ಲದ್ದರ ಬಗ್ಗೆ ವಿಜ್ಞಾನಿಗಳನ್ನು ಸಂಪರ್ಕಿಸಿ, ‘ಇದೇನು ಕಂಡುಹಿಡಿಯಿರಿ’ ಎಂದು ಹೇಳುತ್ತಿದ್ದರು. ತಾವು ತಿಳಿದುಕೊಂಡಿದ್ದನ್ನು ಓದುಗರಿಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುತ್ತಿದ್ದರು. ಇದಕ್ಕಿಂತ ವಿಶೇಷವೆಂದರೆ ತೇಜಸ್ವಿ ಅವರು ಬಹುಮಾಧ್ಯಮ ಪರಿಣಿತರು. ಲೇಖನ, ಕಾದಂಬರಿ, ಪತ್ರಿಕಾ ಯೋಜನೆಗಳು, ದೃಷ್ಟಾಂತಗಳು ಛಾಯಾಚಿತ್ರಗಳ ಮೂಲಕ ಬೇರೆ ಬೇರೆ ಮಾಧ್ಯಮಗಳನ್ನು ಬಳಸಿಕೊಂಡು ತಮಗೆ ಅನಿಸಿದ್ದನ್ನು ಹೇಳಿದರು. ಈಗಿನ ನಮ್ಮ ಪ್ರಮುಖ ಸವಾಲೆಂದರೆ ಹಳ್ಳಿಗಳು ಖಾಲಿಯಾಗುತ್ತಿವೆ. ನಿಸರ್ಗದ ಜೊತೆ ಸಂಪರ್ಕ ಇದ್ದವರ ಸಂಖ್ಯೆ ಕಡಿಮೆಯಾಗುತ್ತಿದೆ. ನೆಲಮೂಲದ ಜ್ಞಾನವೂ ಖಾಲಿಯಾಗುತ್ತಿದೆ. ಕೌಶಲಗಳು ಕಡಿಮೆಯಾಗುತ್ತಿವೆ. ಔಷಧ ಸಸ್ಯಗಳನ್ನು ಗುರುತಿಸಬಲ್ಲವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಡವಿ ಜೇನು ಸಂಗ್ರಹಿಸುವ ಪರಿಣಿತರು ಖಾಲಿಯಾಗುತ್ತಿದ್ದಾರೆ. ಹೀಗೆ ಆ ಎಲ್ಲ ಶಿಸ್ತು, ಪಾರಂಪರಿಕ ಜ್ಞಾನ ಕಡಿಮೆಯಾಗುತ್ತಿದೆ. ಈಗೇನಿದ್ದರೂ ಕಾರ್ಪೊರೇಟ್ ಸಂಸ್ಥೆಗಳ ಏಜೆಂಟರು, ಚಾರಣಪಂಡಿತರು, ರೆಸಾರ್ಟ್ ಮಾಲಕರು ನಗರದವರಿಗೆ ನಿಸರ್ಗ ತೋರಿಸುತ್ತೇವೆಂದು ಹೊರಟಿದ್ದಾರೆ. ದಿನದಿನಕ್ಕೆ ತೇಜಸ್ವಿ ಹೆಚ್ಚುಹೆಚ್ಚು ಪ್ರಸ್ತುತರಾಗುತ್ತಿದ್ದಾರೆ. ಅವರನ್ನು ಜನರ ಬಳಿ ಕೊಂಡೊಯ್ಯುವ ಕೆಲಸ ನಿರಂತರ ನಡೆಯಬೇಕಿದೆ.

ಆ ನಿಟ್ಟಿನಲ್ಲಿ ನಾನು ಈ ಸಂಕಲನದಲ್ಲಿ ತೇಜಸ್ವಿಯವರ ತುಡಿತಗಳ ಕೆಲವು ಉದಾಹರಣೆಗಳನ್ನು ಕೊಟ್ಟು, ಕೊಂಚ ವಿಸ್ತರಣೆಯನ್ನೂ ಮಾಡಿದ್ದೇನೆ. ತೇಜಸ್ವಿ ಬರೆಯದೇ ಇದ್ದ, (ಇಂದು ಅವರು ಬದುಕಿದ್ದಿದ್ದರೆ) ಬರೆಯಬಹುದಾಗಿದ್ದ ಕೆಲವು ನೈಸರ್ಗಿಕ ವಿದ್ಯಮಾನಗಳನ್ನು ಇಲ್ಲಿ ಪೋಣಿಸಿದ್ದೇನೆ. ತೇಜಸ್ವಿಯವರು ಸಾಹಿತ್ಯದಿಂದ ಆಚೆಗೆ, ಅಕ್ಷರಲೋಕದಿಂದ ಆಚೆಗೂ, ಕನ್ನಡ ಭಾಷೆಯಿಂದ ಆಚೆಗೂ ತಮ್ಮ ಪ್ರಭಾವವನ್ನು ಸ್ಥಾಪಿಸಿದ್ದಾರೆ. ಅವರು ಕಂತಿ 15 ವರ್ಷಗಳ ನಂತರವೂ ಅವರ ಪ್ರಭೆ, ನಮ್ಮಾಳಗಿನ ಇನ್‌ವರ್ಟ್ ಮೂಲಕ ಬೆಳಕನ್ನು ಸೂಸುತ್ತಲೇ ಇರುತ್ತದೆ. ಆ ಪ್ರಭೆ ವರ್ಷ ವರ್ಷಕ್ಕೆ ಇನ್ನಷ್ಟು ವ್ಯಾಪಿಸುವ ಹಾಗೆ, ಅದು ಕಾಡಿನ ಜೀವಲೋಕದ ಬಗ್ಗೆ ನಮ್ಮಂಥ ನಗರವಾಸಿಗಳ ಮನಸ್ಸಿನೊಳಗಿನ ಕತ್ತಲೆಯನ್ನು ಓಡಿಸುವ ಹಾಗೆ ಆಗಬೇಕು. ಅದು ನನ್ನ ಈ ಕೃತಿಯ ಉದ್ದೇಶ.

ಕೃತಿ: ಪೂಚಂತೇ ಗ್ರೇಟ್‌ಯಾಕಂತೆ? ಲೇಖನಗಳ ಸಂಕಲನ

ಲೇ: ನಾಗೇಶ ಹೆಗಡೆ ಪುಟಗಳು- 140, ಬೆಲೆ- ರೂ. 150

ಪ್ರ: ಭೂಮಿ ಬುಕ್ಸ್, 9449177628 (ನವಕರ್ನಾಟಕ ಪ್ರಕಾಶನದ ಆನ್‌ಲೈನ್

ಮಳಿಗೆಯಲ್ಲೂ ಲಭ್ಯ)

share
ನಾಗೇಶ ಹೆಗಡೆ
ನಾಗೇಶ ಹೆಗಡೆ
Next Story
X