ಭರವಸೆ ಕಳೆದುಕೊಳ್ಳದಿರೋಣ...

ಸೋಮವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ಹಿರಿಯ ಪತ್ರಕರ್ತೆ ದಿ.ಗೌರಿ ಲಂಕೇಶ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.
ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಬೇಕಾಗಿದೆ. ವಿಮೋಚನೆಯ ರೂಪ ಅದು. ನಾವು ಸೋತಿದ್ದೇವೆ ಎಂದುಕೊಳ್ಳಲಾಗದು. ಪ್ರತಿಯೊಂದು ಸಣ್ಣ ಗೆಲುವೂ ಗೆಲುವೇ. ಅಲ್ಲಿಂದ ಶುರುವಾಗುವ ನಮ್ಮ ಯಾನ ಹೊಸ ವ್ಯವಸ್ಥೆಯನ್ನು ತರುವುದರ ಕಡೆಗೆ ಸಾಗಬೇಕಿದೆ. ಈಗಿರುವುದಕ್ಕೊಂದು ಕೊನೆಯಿದ್ದೇ ಇದೆ. ಅದು ಭೌತ ನಿಯಮ. ಇದು ಕೊನೆಯಾಗಲೇಬೇಕು. ಭರವಸೆ ಕಳೆದುಕೊಳ್ಳಬೇಕಿಲ್ಲ.
ನಾನು ತುಂಬ ಗೌರವಿಸುವ ಎಲ್ಲರೂ ಇಲ್ಲಿದ್ದೀರಿ. ಮೂರು ದಿನಗಳ ಹಿಂದೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಇಂಥ ಹೊತ್ತಲ್ಲಿ ಆಕೆಯ ಸಮಾಧಿ ಸ್ಥಳ ಬಿಟ್ಟು ಬರಲು ಮನಸ್ಸು ಒಪ್ಪುತ್ತದೊ ಇಲ್ಲವೊ ಗೊತ್ತಿರಲಿಲ್ಲ. ಆದರೆ ನಾನಿಲ್ಲಿಗೆ ಗೌರಿಗಾಗಿ ಬರದೇ ಹೋದರೆ ನನ್ನ ತಾಯಿಯೇ ನನ್ನ ಬಗ್ಗೆ ನಾಚಿಕೆಪಟ್ಟುಕೊಂಡಾಳೆಂದು ಭಾವಿಸಿ ನಾನಿಲ್ಲಿದ್ದೇನೆ. ಗೌರಿ ಎಂಥವರಾಗಿದ್ದರೆಂದರೆ, ಪ್ರತಿಸಲ ನಾನೇನಾದರೂ ಬರೆದಾಗಲೂ ತುಂಬ ಉತ್ಸಾಹದಿಂದ ಕರೆ ಮಾಡುತ್ತಿದ್ದರು. ‘‘ಅರುಂಧತಿ, ನಾನಿದನ್ನು ಅನುವಾದಿಸಲೇ’’ ಎಂದು ಕೇಳುತ್ತಿದ್ದರು. ‘‘ಐ ಲವ್ ಯೂ’’ ಎನ್ನುತ್ತಿದ್ದರು. ಇಂಥ ಬಾಂಧವ್ಯ ನಮ್ಮಿಬ್ಬರ ಮಧ್ಯೆ ಇತ್ತು. ಗೌರಿ ಇಂದು ಇಲ್ಲ. ತೀಸ್ತಾ ಈಗಷ್ಟೆ ಜೈಲಿನಿಂದ ಹೊರಬಂದಿದ್ದಾರೆ.. ಬಿಲ್ಕಿಸ್ ಬಾನು ವಿಚಾರದಲ್ಲಿ ಏನಾಯಿತೆಂಬುದು ನಮಗೆಲ್ಲಾ ಗೊತ್ತಿದೆ. ಸರಕಾರ ಯಾವ ಬಗೆಯ ಸಂದೇಶವನ್ನು ನಮಗೆ ಕೊಡಲು ಯತ್ನಿಸುತ್ತಿದೆ ಎಂಬುದನ್ನು ಯೋಚಿಸುತ್ತಿದ್ದೇನೆ. ಇತ್ತೀಚಿನ ವಾರಗಳಲ್ಲಿ ತೀಸ್ತಾ ಜೈಲಿನಲ್ಲಿದ್ದಾಗ ನಾನು, ನ್ಯಾಯ ಮತ್ತು ಶಾಂತಿಗಾಗಿ ನಿಂತಿರುವವರು ಗುಜರಾತ್ ಹತ್ಯಾಕಾಂಡದ ಅಧ್ಯಯನದಲ್ಲಿ ಸಂಗ್ರಹಿಸಿದ ಕಾನೂನು ದಾಖಲೆಗಳನ್ನು ಬಹಳ ಗಮನವಿಟ್ಟು ಓದುತ್ತಿದ್ದೆ. ಇದೊಂದು ನಿಜಕ್ಕೂ ಅಸಾಧಾರಣ ಕೆಲಸ. ಫ್ಯಾಶಿಸ್ಟ್ ವ್ಯವಸ್ಥೆಯೊಳಗೂ ಎಲ್ಲೋ ನ್ಯಾಯ ಸಿಕ್ಕೀತು ಎಂಬ ಸಣ್ಣ ಆಶಾವಾದ ಹೊಂದಿದ್ದವರಲ್ಲಿ ನಾನೂ ಒಬ್ಬಳು.
ತೀಸ್ತಾ ಮತ್ತು ಸಂಘಟನೆಗಳು ಮಾಡಿರುವ ಕೆಲಸ ಅದ್ಭುತವಾದುದು. ಯಾಕೆಂದರೆ ಮುಂದೊಂದು ದಿನ ಈ ಖಚಿತ ದಾಖಲಾತಿಗಳ ಸಂಪುಟವೇ ಗುಜರಾತ್‌ನಲ್ಲಿ ಏನು ಸಂಭವಿಸಿತೋ ಆ ಕ್ರೈಮ್‌ಗೆ ಸಾಕ್ಷ ಒದಗಿಸಬೇಕು. ದೇಶದಲ್ಲೆಲ್ಲೋ ರೈಲ್ವೆ ದುರಂತ ಘಟಿಸಿದರೆ ರೈಲ್ವೆ ಮಂತ್ರಿಯೇ ರಾಜೀನಾಮೆ ಕೊಡುತ್ತಿದ್ದ ದೇಶವಾಗಿತ್ತು ನಮ್ಮದು. ಆದರೆ ಇಂದು ಹತ್ಯಾಕಾಂಡದ ಚುನಾವಣಾ ಲಾಭವನ್ನು ಮಾಡಿಕೊಳ್ಳುವ, ಹೊಸ ಹತ್ಯಾಕಾಂಡಗಳ ಮತ್ತು ಹಳೆಯ ಹತ್ಯಾಕಾಂಡಗಳ ಲಾಭ ಗಿಟ್ಟಿಸುವ ಜನರನ್ನು ನೋಡುತ್ತಿದ್ದೇವೆ. ಗುಜರಾತ್ ಹತ್ಯಾಕಾಂಡ ಸಂಭವಿಸಿದಾಗ ಬಿಜೆಪಿ ಮತ್ತು ನರೇಂದ್ರ ಮೋದಿ ಚುನಾವಣೆಗೆ ಕರೆ ಕೊಡುವ ತರಾತುರಿ ತೋರಿಸಿದ್ದನ್ನು ಕಂಡೆವು. ಯಾಕೆ ಅಂಥ ತುರ್ತು ಇತ್ತು? ಏನಿತ್ತು ಅಂಥ ತುರ್ತು? ತನ್ನ ಕಣ್ಣೆದುರೇ ಇಡೀ ಕುಟುಂಬದವರ ಹತ್ಯೆಯಾದುದನ್ನು ಬಿಲ್ಕಿಸ್ ಕಣ್ಣಾರೆ ಕಂಡಾಗ, ಸಾಮೂಹಿಕ ಅತ್ಯಾಚಾರಕ್ಕೊಳಗಾದಾಗ ಅಲ್ಲಿ ಯಾವುದು ಪ್ರಜಾಪ್ರಭುತ್ವವನ್ನು ಕಾಯಬೇಕಿತ್ತೊ ಆ ಇಡೀ ವ್ಯವಸ್ಥೆಯೇ ಶಾಮೀಲಾಗಿದ್ದ ಒಳಸಂಚು ಇತ್ತು. ಅಂಥ ಅತ್ಯಾಚಾರಿಗಳು, ಹಂತಕರು ಬಿಡುಗಡೆಯಾದರು. ಯಾವ ಸಂದೇಶವನ್ನು ಕೊಡುತ್ತಿದೆ ಇದು? ಅವರು ಮತ್ತೆ ಜೈಲುಪಾಲಾಗಲೂಬಹುದು. ಆದರೆ ಅವರ ಬಿಡುಗಡೆಗೆ ಕಾರಣರಾದ ಮಂದಿ, ಅವರನ್ನು ಕಾನೂನಾತ್ಮಕ ಪ್ರಕ್ರಿಯೆಯ ಮೇಲೆ ಬಿಡುಗಡೆ ಮಾಡಿದವರು - ಇಲ್ಲಿ ಎಲ್ಲದರ ದುರ್ಬಳಕೆಯಾಗಿದ್ದಿರಬಹುದು, ಆದರೆ ಯಾರೂ ಅದನ್ನು ಹೇಳುತ್ತಿಲ್ಲ - ಸಮಿತಿಯಲ್ಲಿದ್ದ ಹೆಚ್ಚಿನವರು ಬಿಜೆಪಿಯವರೇ. ಅವರ ಪ್ರಕಾರ, ಈಗ ಶಿಕ್ಷೆಗೊಳಗಾದವರಾರೂ ಅಂಥ ಅಪರಾಧ ಎಸಗುವುದಕ್ಕೆ ಸಾಧ್ಯವೇ ಇಲ್ಲ, ಯಾಕೆಂದರೆ ಅವರು ಬ್ರಾಹ್ಮಣರು. ಗುಜರಾತ್‌ಗೆ ಸೀಮಿತವಾದ ಉದ್ದೇಶ ಸಾಧಿಸಿಕೊಳ್ಳಲು ಪಕ್ಷವೊಂದು ತನ್ನ ರಾಜಕೀಯ ಪರಂಪರೆಯ ಹಕ್ಕುದಾರಿಕೆಯ ಆಂತರಿಕ ಕಾರಣಗಳನ್ನೇ ಅಂತರ್‌ರಾಷ್ಟ್ರೀಯ ಕಾರಣಗಳಂತೆ ಬಿಂಬಿಸುವ ಯತ್ನವೊಂದರಲ್ಲಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಇದು ಅತ್ಯಂತ ಅಪಾಯಕಾರಿ. ಇಂದು ದೇಶದಲ್ಲಿ ಸರಕಾರ, ರಾಜ್ಯ, ಅದರ ಅಂಗಸಂಸ್ಥೆಗಳು ಮತ್ತು ಒಂದು ರಾಜಕೀಯ ಪಕ್ಷ ಇವೆಲ್ಲದರ ಸಮ್ಮಿಲನವನ್ನು ಕಾಣುತ್ತಿದ್ದೇವೆ. ಅವೆಲ್ಲವೂ ಒಂದಾಗುತ್ತಿವೆ. ಒಂದರಿಂದೊಂದು ಬಿಡಿಸಿಕೊಳ್ಳಲಾರದಂತೆ ಆಗುತ್ತಿವೆ. ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದಲ್ಲಿ ಪಕ್ಷವೊಂದು ತೊಡಗಿದೆ ಎಂದರೆ ಏನರ್ಥ? ನಿಜವಾಗಿಯೂ ಅವರು ಏನನ್ನು ಹೇಳುತ್ತಿದ್ದಾರೆ? ಪ್ರತಿಪಕ್ಷವೇ ಇರಕೂಡದೆಂಬ ಸ್ಥಿತಿ. ಪ್ರತಿಪಕ್ಷವಿರದ ಪ್ರಜಾಪ್ರಭುತ್ವ. ಅಂಥ ಸನ್ನಿವೇಶವೊಂದು ಇರದು. ವಿರೋಧಪಕ್ಷವಿಲ್ಲದ ಪ್ರಜಾಪ್ರಭುತ್ವವು ಸಾಧ್ಯವೇ ಇಲ್ಲ. ಎತ್ತ ಸಾಗಿದ್ದೇವೆ ಎಂಬುದನ್ನು ಅವರು ಸ್ಪಷ್ಟವಾಗಿ ಸೂಚಿಸುತ್ತಿದ್ದಾರೆ. ಎಡಪಂಥೀಯರೆಂದು ಹೇಳಿಕೊಳ್ಳುವವರು, ಉದಾರವಾದಿಗಳೆಂದು ಹೇಳಿಕೊಳ್ಳುವವರು ನಾವು ಬಹಳಷ್ಟು ಮಂದಿ ಅವರು ಫ್ಯಾಶಿಸ್ಟ್ ಹೌದೇ ಅಲ್ಲವೇ ಎಂದು ಚರ್ಚಿಸುತ್ತಿದ್ದರೆ, ಅವರು ಮಾತ್ರ ತಮಗೇನು ಬೇಕೆಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿ ಮುಸ್ಲಿಮ್ ಮತಗಳಿಲ್ಲದೆ ಗೆಲ್ಲಬಲ್ಲೆ ಎಂದು ತೋರಿಸಿದೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಾತ್ರವಲ್ಲ, ಪ್ರತಿದಿನ ನಾವು ನೋಡುತ್ತಿದ್ದೇವೆ.
ಸಂವಿಧಾನವಿದೆ, ಕಾನೂನುಗಳಿವೆ, ಆದರೆ ಎಲ್ಲವೂ ನಿಮ್ಮ ಜಾತಿ, ಧರ್ಮ, ಲಿಂಗದ ಮೇಲೆ ಅವಲಂಬಿತ. ನೀವ್ಯಾರು ಎಂಬುದರ ಮೇಲೆ ಕಾನೂನು ಅನ್ವಯವಾಗುತ್ತದೆ. ಇಂಥದೊಂದು ರೀತಿ ಬಹುಕಾಲದಿಂದ ನಡೆದುಬಂದಿದ್ದು, ಈಗ ಸ್ಪಷ್ಟವಾಗಿದೆ. ತಮಗೆ ಬೇಕಿರದ ಈ 200 ಮಿಲಿಯನ್ ಮತದಾರರನ್ನು ಏನು ಮಾಡುವುದೆಂಬ ವಿಚಾರ ಕ್ರಿಯಾಶೀಲವಾಗಿದೆ. ವ್ಯವಸ್ಥಿತವಾಗಿಯೇ ಎಲ್ಲವೂ ನಡೆದಿದೆ. ನಮ್ಮಲ್ಲಿ ಚುನಾವಣೆಯಿದೆ, ಆದರೆ ಚುನಾವಣಾ ವ್ಯವಸ್ಥೆ ಏನಾಗಿದೆ ಎಂಬುದು ಗೊತ್ತಿದೆ. ವಿಶ್ವದಲ್ಲಿಯೇ ಶ್ರೀಮಂತ ಪಕ್ಷ ನಮ್ಮಲ್ಲಿದೆ. ಈ ಅತಿ ಶ್ರೀಮಂತ ಪಕ್ಷ ಸಂಸದರನ್ನು, ಶಾಸಕರನ್ನು ಖರೀದಿಸಬಲ್ಲದು. ಹೊಸ ಜನಾಂದೋಲನವೇನಾದರೂ ನಡೆದರೆ ನನ್ನದೊಂದು ಸಲಹೆಯಿದೆ. ಚುನಾಯಿತ ಪ್ರತಿನಿಧಿಗಳಿಗೆ ಸಂಸದರು ಮತ್ತು ಶಾಸಕರಿಗೆ ಕನಿಷ್ಠ ಬೆಂಬಲ ಬೆಲೆಗಾಗಿ ಕಿಸಾನ್ ಆಂದೋಲನದ ರೀತಿಯಲ್ಲಿ ಅಭಿಯಾನ ನಡೆಸಬೇಕು. ಅವರು ರೆಸಾರ್ಟ್‌ಗೆ ಇಲ್ಲವೇ ಅದಾನಿ ಗೋಡೌನ್‌ಗೆ ಹೋಗಬಹುದು. ತಮ್ಮನ್ನೇ ಹರಾಜಿಗೆ ಹಾಕಿಕೊಳ್ಳಬಹುದು. ತಮ್ಮ ಕನಿಷ್ಠ ದರಕ್ಕಾಗಿ ಒತ್ತಾಯಿಸಬಹುದು. ಇಂದು ಜನರು ಒಂದು ನಿರ್ದಿಷ್ಟ ಪಕ್ಷದ ಅಭ್ಯರ್ಥಿಯೆಂದು ಆಯ್ಕೆ ಮಾಡುವ ಪ್ರತಿನಿಧಿ ನಾಳೆ ಆ ಪಕ್ಷದ ಪ್ರತಿನಿಧಿಯೇ ಆಗಿರುವುದಿಲ್ಲ. ಅದೂ ಕೂಡ ಕಾನೂನಾತ್ಮಕವಾಗಿ. ಇದೆಂಥ ವ್ಯವಸ್ಥೆ? ಪ್ರಜಾಪ್ರಭುತ್ವ ಎನ್ನಲಾಗುವ ಇದು ಪ್ರಜಾಪ್ರಭುತ್ವವೇ ಅಲ್ಲ. 80ರ ದಶಕದ ಕಡೆಯಲ್ಲಿ 90ರ ಆರಂಭದಲ್ಲಿ ಎರಡೇ ಎರಡು ಮೂಲಭೂತವಾದಗಳಿದ್ದವು. ಒಂದು ಧಾರ್ಮಿಕವಾದದ್ದು, ಇನ್ನೊಂದು ಆರ್ಥಿಕವಾದದ್ದು. ಆದರೆ ಇಂದು ನಿರುದ್ಯೋಗದಿಂದ ಬಳಲುತ್ತಿರುವ ಸ್ಥಿತಿ, ಇನ್ನಷ್ಟು ಕರಾಳತೆಯನ್ನು ತಂದುಕೊಳ್ಳುವುದಕ್ಕಾಗಿ ಮತ ಚಲಾಯಿಸಬೇಕಾದ ಸನ್ನಿವೇಶದಲ್ಲಿರುವ ಮತದಾರ. ಶತಮಾನಗಳಿಂದ ಇರುವ ಜಾತಿಪದ್ಧತಿ, ಆದರೆ ಅದನ್ನೇ ಬೆಂಬಲಿಸುವವರಿಗೆ ಮತ ಕೊಡಬೇಕಾದ ವಾಸ್ತವ, ಮುಸ್ಲಿಮ್ ಮತದಾರರನ್ನು ಅಸ್ಪೃಶ್ಯರನ್ನಾಗಿಸುತ್ತಿರುವ ವ್ಯವಸ್ಥೆ, ವ್ಯವಸ್ಥಿತವಾದ ಬೆದರಿಕೆ. ಇದೆಲ್ಲದರ ಬಗ್ಗೆ ಗಂಭೀರವಾಗಿ ಕೇಳಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿದ್ದೇವೆ.
ಪ್ಲ್ಯಾಟ್‌ಗಳ ದಟ್ಟಣೆಯಿರುವ ದಿಲ್ಲಿ ನಗರಿಯಲ್ಲಿ ಅದೆಷ್ಟೋ ಮಂದಿ ಬೀದಿಬದಿಯಲ್ಲೇ ಹಸಿವಿನಿಂದ ಬಳಲುತ್ತಿದ್ದಾರೆ. 50ರ 60ರ, 70ರ ದಶಕದಲ್ಲಿ ಕ್ರಾಂತಿಗಾಗಿ ಒತ್ತಾಯಿಸುತ್ತಿದ್ದೆವು. ಸಂಪತ್ತಿನ, ಭೂಮಿಯ ಮರುಹಂಚಿಕೆಯ ಬಗ್ಗೆ ಕೇಳುತ್ತಿದ್ದೆವು. ಉಳುವವನಿಗೇ ಭೂಮಿಯ ಒಡೆತನಕ್ಕಾಗಿ ಕೇಳುತ್ತಿದ್ದೆವು. ಅಂಥ ಚಳವಳಿಗಳು ಮುಗಿದುಹೋದವು. 90ರ ಹೊತ್ತಿಗೆ ಸ್ಥಳಾಂತರ ವಿರೋಧಿ ಹೋರಾಟಗಳು ಕಾಣಿಸಿದವು. ನಾವೇನು ಹೊಂದಿದ್ದೇವೆಯೋ ಅದರಿಂದ ನಮ್ಮನ್ನು ದೂರ ಮಾಡಬೇಡಿ ಎಂಬ ಕೂಗಾಗಿತ್ತು ಅದು. ಅವೂ ತಣ್ಣಗಾದವು. 2000ದ ಹೊತ್ತಿಗೆ ಕನಿಷ್ಠ ಕೂಲಿಗಾಗಿ ಆಮೂಲಾಗ್ರ ಆಗ್ರಹ ಶುರುವಾಯಿತು. ಈಗ ಎಲ್ಲಿಗೆ ಬಂದಿದೆಯೆಂದರೆ, 5 ಕೆಜಿ ಹಿಟ್ಟು ಕೊಡುವುದನ್ನೇ ಅಪಾಯಕಾರಿಯೆನ್ನುವಂತೆ ಬಿಂಬಿಸಲಾಗುತ್ತಿದೆ. ಅದೇ ಮೋದಿ ಉಚಿತವಾಗಿ ಉಪ್ಪುಕೊಟ್ಟರೆ, ಉಪ್ಪಿನ ಋಣ ತೀರಿಸುವುದಕ್ಕಾದರೂ ನಮಗೆ ವೋಟು ಕೊಡಿ ಎಂದು ಕೇಳದಿರಲಾರರು. ಈಗ ಪೌರತ್ವಕ್ಕಾಗಿ ಹೋರಾಡಬೇಕಾದ ಸ್ಥಿತಿ ತಲೆದೋರಿದೆ. ಅಸ್ಸಾಮಿನಲ್ಲಿ ಲಕ್ಷಾಂತರ ಮಂದಿ ಅಕ್ಷರಶಃ ಅನಾಥರಾಗಿದ್ದಾರೆ. ಕಾಶ್ಮೀರದಲ್ಲಿ ಇದ್ದಕ್ಕಿದ್ದಂತೆ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ತಪ್ಪಿಸಿಬಿಡಲಾಗುತ್ತಿದೆ. ಇದನ್ನು ಊಹೆ ಮಾಡಿಕೊಳ್ಳುವುದಕ್ಕಾದರೂ ಸಾಧ್ಯವೇ? ನಾವು 15 ನಿಮಿಷ ಕೂಡ ಫೋನ್ ಬಿಟ್ಟಿರಲಾರೆವು. ಅಂಥದ್ದರಲ್ಲಿ ಹೊರಜಗತ್ತಿನ ಸಂಪರ್ಕವೇ ತಿಂಗಳುಗಟ್ಟಲೆ ಇರದಂತೆ ಮಾಡುವುದೆಂದರೆ? ನಾವು ಹಿಂದಕ್ಕೆ ಚಲಿಸುತ್ತಿದ್ದೇವೆ. ಜನರಿಗೆ ಗೊತ್ತಿದೆ ತಾವು ಯಾರಿಗೆ ವೋಟು ಹಾಕುತ್ತಿದ್ದೇವೆಯೋ ಅವರಿಂದಲೇ ಹೀಗಾಗುತ್ತಿರುವುದು ಎಂಬುದು. ಆದರೆ ಅವರನ್ನೇ ಮತ್ತೆ ಅಧಿಕಾರಕ್ಕೆ ತರುತ್ತಲೂ ಇದ್ದಾರೆ. ರಾಜಕಾರಣಿಗಳ ಬಳಿ ಹಣ ಇದೆ, ಎಷ್ಟು ಬೇಕಾದರೂ ಖರ್ಚು ಮಾಡುವಷ್ಟು. ಇಂಥ ಸ್ಥಿತಿಯಲ್ಲಿ ಯಾವ ವಸಾಹತುಸಾಹಿ ವ್ಯವಸ್ಥೆಯಡಿಯಲ್ಲಿ ಇದ್ದೆವೋ ಅಲ್ಲಿಂದಲೇ ಆರಂಭಿಸಬೇಕಾಗಿದೆ. ಬೀದಿಯಿಂದಲೇ ಆರಂಭಿಸಬೇಕಾಗಿದೆ. ಬೀದಿಗಳೂ ಇಂದು ಶುದ್ಧವಿಲ್ಲ. ಎಲ್ಲರಲ್ಲಿಯೂ ವಿಷಬೀಜ ಬಿತ್ತಲಾಗಿದೆ. ಟಿವಿ ಚಾನೆಲ್‌ಗಳ ಮೂಲಕ ಮಾತ್ರವಲ್ಲ, ಸೀರಿಯಲ್, ಸಿನೆಮಾ ಎಲ್ಲದರ ಮೂಲಕವೂ ದಿನದ ಇಪ್ಪತ್ನಾಲ್ಕು ಗಂಟೆಯೂ ವಿಷಬೀಜ ಬಿತ್ತಲಾಗುತ್ತಿದೆ. ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಬೇಕಾಗಿದೆ. ವಿಮೋಚನೆಯ ರೂಪ ಅದು. ನಾವು ಸೋತಿದ್ದೇವೆ ಎಂದುಕೊಳ್ಳಲಾಗದು. ಪ್ರತಿಯೊಂದು ಸಣ್ಣ ಗೆಲುವೂ ಗೆಲುವೇ. ಅಲ್ಲಿಂದ ಶುರುವಾಗುವ ನಮ್ಮ ಯಾನ ಹೊಸ ವ್ಯವಸ್ಥೆಯನ್ನು ತರುವುದರ ಕಡೆಗೆ ಸಾಗಬೇಕಿದೆ. ಈಗಿರುವುದಕ್ಕೊಂದು ಕೊನೆಯಿದ್ದೇ ಇದೆ. ಅದು ಭೌತ ನಿಯಮ. ಇದು ಕೊನೆಯಾಗಲೇಬೇಕು. ಭರವಸೆ ಕಳೆದುಕೊಳ್ಳಬೇಕಿಲ್ಲ. ಇಂಕ್ವಿಲಾಬ್ ಜಿಂದಾಬಾದ್.







