ದ.ಕ.ಜಿಲ್ಲೆಯಲ್ಲಿ ಸಂಭ್ರಮ ಮೋಂತಿ ಹಬ್ಬ ಆಚರಣೆ

ಮಂಗಳೂರು, ಸೆ.8: ದ.ಕ.ಜಿಲ್ಲಾದ್ಯಂತ ಕರಾವಳಿಯಲ್ಲಿ ಕೆಥೋಲಿಕ್ ಕ್ರೈಸ್ತರು ಗುರುವಾರ ಸಂಭ್ರಮದ ಮೋಂತಿ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರಯುಕ್ತ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ನಡೆಯಿತು.
ಯೇಸು ಸ್ವಾಮಿಯ ತಾಯಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು ಕೆಥೋಲಿಕ್ ಕ್ರೈಸ್ತರು ಆಶೀರ್ವಚನ ಮಾಡಿದ ಭತ್ತದ ತೆನೆಯ ಕಾಳುಗಳನ್ನು ಹಾಲು ಅಥವಾ ಪಾಯಸದಲ್ಲಿ ಬೆರೆಸಿ ಸೇವಿಸುತ್ತಾರೆ. ಅಲ್ಲದೆ ಸಸ್ಯಾಹಾರ ಭೋಜನವನ್ನು ಕುಟುಂಬದ ಜೊತೆ ಸವಿಯುತ್ತಾರೆ.
ಎಳೆಯ ಮಕ್ಕಳು ತಟ್ಟೆ, ಬುಟ್ಟಿಯಲ್ಲಿ ಹೂವುಗಳನ್ನು ಚರ್ಚ್‌ಗೆ ಕೊಂಡೊಯ್ದು ಮೇರಿ ಮಾತೆಗೆ ಅರ್ಪಿಸಿ ಸಿಹಿ ತಿಂಡಿಗಳ ಜೊತೆಗೆ ಕಬ್ಬುಗಳನ್ನು ಪಡೆದುಕೊಂಡು ಸಂಭ್ರಮಿಸಿದರು. ಮೆರವಣಿಗೆಯ ಮೂಲಕ ಭತ್ತದ ತೆನೆಯನ್ನು ತಂದು ಚರ್ಚ್‌ನೊಳಗಿಟ್ಟು ಆಶೀರ್ವಾದ ಪಡೆದರು. ಹೆಚ್ಚಿನ ಚರ್ಚ್‌ಗಳಲ್ಲಿ ಹಬ್ಬದ ಸಂತೋಷ ಹಂಚಿಕೊಳ್ಳಲು ಭಕ್ತರಿಗೆ ಕಬ್ಬುಗಳನ್ನು ವಿತರಿಸಲಾಯಿತು.
ಕೆಲವು ಚರ್ಚ್‌ಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಹಬ್ಬ ಆಚರಿಸಲು ಬೇಕಾದ ಸಾಮಗ್ರಿಗಳನ್ನು ಹಂಚಲಾಯಿತು. ಅಲ್ಲದೆ ಚರ್ಚ್ ಮಟ್ಟದಲ್ಲಿ ವಿವಿಧ ಸ್ಪರ್ಧೆ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ನಗರದ ಮಿಲಾಗ್ರಿಸ್, ರೊಸಾರಿಯೋ, ಲೇಡಿಹಿಲ್, ಬೆಂದೂರ್‌ವೆಲ್, ಅಶೋಕ ನಗರ, ಕೂಳೂರು, ಕುಲಶೇಖರ ಮತ್ತಿತರ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಈ ಬಾರಿ ರೋಮ್‌ಗೆ ತೆರಳಿರುವ ಕಾರಣ ಕರಾವಳಿಯ ಮೋಂತಿ ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಮೋಂತಿ ಹಬ್ಬದ ಅಂಗವಾಗಿ ಕ್ರೈಸ್ತ ಕುಟುಂಬಸ್ಥರು ಸಸ್ಯಾಹಾರ ಭೋಜನವನ್ನು ಕುಟುಂಬದ ಮೂಲ ಮನೆಯ ಹಿರಿಯರ ಜತೆಯಲ್ಲಿ ಸೇರಿಕೊಂಡು ಸವಿದರು. ಬಳಿಕ ಚರ್ಚ್‌ಗಳಿಂದ ತಂದ ತೆನೆಯ ಕಾಳುಗಳನ್ನು ಹಾಲು, ಪಾಯಸದ ಜತೆ ಸೇವಿಸಿದರು. ವಿದೇಶದಲ್ಲಿರುವ ತಮ್ಮ ಕುಟುಂಬ ಸದಸ್ಯರಿಗೆ ಅಂಚೆ ಲಕೋಟೆಯಲ್ಲಿ ತುಂಬಿಸಿದ ತೆನೆಯನ್ನು ಕಳುಹಿಸಿಕೊಟ್ಟರು.
























