ಮನಪಾ: ನೂತನ ಮೇಯರ್ ಯಾರಾಗಲಿದ್ದಾರೆ?; ಕುತೂಹಲಕ್ಕೆ ಇನ್ನೂ ಬಿದ್ದಿಲ್ಲ ತೆರೆ

ಮಂಗಳೂರು, ಸೆ.8: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್ ಹಾಗೂ 4 ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆ ಸೆ. 9ರಂದು ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿಯ ಎಲ್ಲಾ ಸದಸ್ಯರು ಅರ್ಹರಾಗಿದ್ದಾರೆ. ಹಾಗಾಗಿ ನೂತನ ಮೇಯರ್ ಸ್ಥಾನಕ್ಕೆ ಪಕ್ಷದಿಂದ ಅಂತಿಮ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈವರೆಗೂ ಮನಪಾದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಲಾಗಿಲ್ಲ.
ಈ ವರ್ಷದ ಮಾರ್ಚ್ 2ರಂದು 23ನೆ ಅವಧಿಯ ಮೇಯರ್ ಚುನಾವಣೆ ನಿಗದಿಯಾಗಿತ್ತು. ಆದರೆ ಕಾನೂನಾತ್ಮಕ ಕಾರಣದಿಂದ ಚುನಾವಣೆ ನಡೆಯದ ಕಾರಣ 22ನೆ ಅವಧಿಯ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಆಗಿ ಸುಮಂಗಲಾ ಅವರು ಮುಂದುವರಿದಿದ್ದಾರೆ.
ಕಳೆದ ಸಾಲಿನಂತೆ ಮೇಯರ್ ಸ್ಥಾನ 23ನೆ ಅವಧಿಗೂ ‘ಸಾಮಾನ್ಯ’ ಮೀಸಲಾತಿಗೆ ದೊರೆತ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಎಲ್ಲಾ ಸದಸ್ಯರು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮೇಯರ್ ಹುದ್ದೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಹೀಗಾಗಿ ರಾಜಕೀಯ ಅನುಭವ ಹಾಗೂ ಪಾಲಿಕೆ ಆಡಳಿತದ ಪೂರ್ಣ ಹಿಡಿತ ಗೊತ್ತಿರುವವರಿಗೆ ಮುಂದಿನ ಮೇಯರ್ ಹುದ್ದೆ ಸಿಗುವ ಸಾಧ್ಯತೆಯಿದೆ. ಬಿಜೆಪಿಯ ಆಡಳಿತಾವಧಿಯ ಎರಡು ಅವಧಿಯಲ್ಲಿಯೂ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರೇ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದರಿಂದ ಈ ಬಾರಿ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಅವಕಾಶ ನೀಡಬೇಕೆಂಬ ಕೂಗು ಇತ್ತು. ಈ ನಡುವೆ, ಸಾಮಾನ್ಯ ಕ್ಷೇತ್ರದಲ್ಲಿ ಮಹಿಳಾ ಸದಸ್ಯರಿಗೂ ಮೇಯರ್ ಆಗುವ ಅವಕಾಶವಿದೆ. ಕಳೆದ ಹಲವು ವರ್ಷಗಳಿಂದ ಬಿಜೆಪಿಯಿಂದ ಮಹಿಳಾ ಮೇಯರ್ ಆಗಿಲ್ಲದ ಕಾರಣ ಮಹಿಳೆಯರನ್ನೂ ಮೇಯರ್ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆ ಇರುವುದರಿಂದ ನೂತನ ಮೇಯರ್ ಹೆಸರನ್ನು ಅಂತಿಮಗೊಳಿಸುವ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆ ಮುಂದುವರಿದಿದೆ.
ಹಿರಿತನದ ಆಧಾರದಲ್ಲಿ ಶರತ್ ಕುಮಾರ್, ಜಯಾನಂದ್ ಅವರ ಹೆಸರು ಕೇಳಿಬರುತ್ತಿದ್ದರೆ, ಜಾತಿ ಸಮೀಕರಣದ ಮೂಲಕ ಕಿರಣ್ ಕುಮಾರ್ ಹಾಗೂ ಜಯಾನಂದ್ ಅವರ ಹೆಸರು ಮೇಯರ್ ಸ್ಥಾನದ ಪೈಪೋಟಿಯಲ್ಲಿದೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರು ಕೂಡ ಕೇಳಿ ಬರುತ್ತಿದ್ದು, ಒಟ್ಟಿನಲ್ಲಿ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮೇಯರ್ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.
ಮಾರ್ಚ್ 2 ರಂದು ನಿಗದಿಯಾಗಿದ್ದ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯನ್ನು ಕಾನೂನಾತ್ಮಕ ಕಾರಣದಿಂದ ನಡೆದಿರಲಿಲ್ಲ. ಹೀಗಾಗಿ ಒಂದು ವರ್ಷದ ಅವಧಿ (ಮಾ.2ಕ್ಕೆ) ಪೂರ್ಣಗೊಳಿಸಿದ್ದ ಪ್ರೇಮಾನಂದ ಶೆಟ್ಟಿ ಅವರೇ ಮೇಯರ್ ಸ್ಥಾನದಲ್ಲಿ ಹಾಗೂ ಸುಮಂಗಳಾ ರಾವ್ ಉಪಮೇಯರ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಈ ಮೂಲಕ 6 ತಿಂಗಳು ಹೆಚ್ಚುವರಿಯಾಗಿ ಅವರು ಅಧಿಕಾರದಲ್ಲಿದ್ದಾರೆ. ಸೆ. 9ರಂದು ಚುನಾವಣೆಯಲ್ಲಿ ಆಯ್ಕೆಯಾಗುವ ನೂತನ ಮೇಯರ್ ಅಧಿಕಾರ ಅವಧಿ ಮೀರಿ ಮುಂದುವರಿದಿರುವ ಕಾರಣ ಹಾಲಿ ಬಿಜೆಪಿ ಆಡಳಿತದ ಕೊನೆಯ ಮೇಯರ್ ಅವರ ಅಧಿಕಾರಾವಧಿ ಅಷ್ಟು ದಿನ (ಉದಾಹರಣೆಗೆ 1 ವರ್ಷ ಅವಧಿಯ ಪೈಕಿ ಇಲ್ಲಿಯವರೆಗೆ 6 ತಿಂಗಳು) ಕಡಿತವಾಗಲಿದೆ.
ಒಂದೆರಡು ದಿನದಲ್ಲಿ ತೀರ್ಮಾನ
ಹೊಸ ಮೇಯರ್ ಸ್ಥಾನಕ್ಕೆ ಇನ್ನೂ ಹೆಸರು ಅಂತಿಮಗೊಂಡಿಲ್ಲ. ಸಾಮಾನ್ಯ ಮೀಸಲಾತಿ ಇರುವುದರಿಂದ ಪಕ್ಷದ ಎಲ್ಲಾ ಸದಸ್ಯರು ಮೇಯರ್ ಹುದ್ದೆಗೆ ಅರ್ಹರಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಪಕ್ಷದ ಪ್ರಮುಖರು ಸಭೆ ನಡೆಸಿದ್ದಾರೆ. ಒಮ್ಮತದಿಂದ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ನಡೆಯಲಿದೆ.
- ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಪಾಲಿಕೆ
ಪಾಲಿಕೆ ಒಟ್ಟು ಸ್ಥಾನಗಳು: 60
ಬಿಜೆಪಿ 44
ಕಾಂಗ್ರೆಸ್ 14
ಎಸ್‌ಡಿಪಿಐ 2