ಮಂಗಳೂರು ವಿವಿ: “ಪ್ರಯೋಗಾಲಯದಲ್ಲಿ ಸುರಕ್ಷತೆ” ಕಾರ್ಯಾಗಾರ ಉದ್ಘಾಟನೆ

ಕೊಣಾಜೆ: ವಿಜ್ಞಾನ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಪ್ರಯೋಗಾಲಯ ಸಹಾಯಕರಿಗೆ ರಾಸಾಯನಿಕಗಳು, ವೈಜ್ಞಾನಿಕ ಉಪಕರಣಗಳ ಬಳಕೆಯ ಸೂಕ್ತ ವಿಧಾನದ ಬಗ್ಗೆ ಜ್ಞಾನ, ಅರಿವು ಅತ್ಯಗತ್ಯ. ತೀವ್ರ ಕಾಳಜಿ ಹಾಗೂ ನಿರಂತರ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಪ್ರಯೋಗಾಲಯದಲ್ಲಿ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು ಎಂದು ಮಂಗಳೂರು ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ನ ಸುರಕ್ಷತಾ ಅಧಿಕಾರಿ ನಾಗರಾಜ ಶ್ಯಾಮ್‌ಭಟ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯೂಎಸಿ) ಮಂಗಳಗಂಗೋತ್ರಿಯ ಎಂ.ಎಸ್. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ “ಪ್ರಯೋಗಾಲದಲ್ಲಿ ಸುರಕ್ಷತೆ” ಎಂಬ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ಕೆ.ಎಸ್. ಜಯಪ್ಪ ಇವರು, ಪ್ರಯೋಗಾಲಯ ಸಹಾಯಕರಿಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತೀ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಒಂದು ದಿನದ ಈ ತರಬೇತಿ ಕಾರ್ಯಾಗಾರದಲ್ಲಿ ಸೈಗ್ನೆನೆ ಇಂಟರ್ನ್ಯಾಷನಲ್ ಲಿ ಇದರ ಶಿವರಾಮ ಬಿ, ಯೆನೆಪೊಯ ರಿಸರ್ಚ್ ಸೆಂಟರ್ ಇದರ ಡಾ. ರೇಖಾ ಪಿ.ಡಿ. ಹಾಗೂ ಪ್ರೊ. ಕೆ.ಎಸ್. ಉದಯ್ ಕುಮಾರ್, ಪ್ರೊ. ಎಂ. ಶರೀಫ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಯೋಗಾಲಯದಲ್ಲಿ ಸುರಕ್ಷತೆಯನ್ನು ಕಾಪಾಡುವಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿರುವ ವಿಧಾನಗಳ ಬಗ್ಗೆ ತಿಳಿಸಿದರು.
ಬೆಂಕಿ ಅವಘಡಗಳು ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗಗಳ ಪ್ರಯೋಗಾಲಯ ಸಹಾಯಕರು ಹಾಗೂ ಅನುಚರರು ಭಾಗವಹಿಸಿ, ತರಬೇತಿ ಪಡೆದುಕೊಂಡರು.
ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಮಂಜುನಾಥ ಪಟ್ಟಾಭಿ ಇವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಐಕ್ಯೂಎಸಿಯ ಉಪ ನಿರ್ದೇಶಕರಾಗಿರುವ ಪ್ರೊ. ವಿಶಾಲಾಕ್ಷಿ ಬಿ. ಕಾರ್ಯಕ್ರಮದ ಉದ್ದೇಶ ಹಾಗೂ ರೂಪರೇಷೆ ಗಳನ್ನು ಸ್ಪಷ್ಟ ಪಡಿಸಿದರು. ಐಕ್ಯೂಎಸಿಯ ಉಪ ನಿರ್ದೇಶಕರಾದ ಪ್ರೊ. ಮೋನಿಕ ಸದಾನಂದ ವಂದಿಸಿದರು.
ರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಸಂತೋಷ್ ಕಾರ್ಯಕ್ರಮ ನಿರೂಪಿಸಿದರು.