ಬಿಜೆಪಿ ಸರಕಾರದ ನಿರ್ಲಕ್ಷ್ಯದಿಂದ ಬೆಂಗಳೂರಿಗೆ ಕಂಟಕ: ಸಿದ್ದರಾಮಯ್ಯ ಕಿಡಿ

ಮಹದೇವಪುರ, ಸೆ.8: ಬಿಜೆಪಿ ಸರಕಾರದ ನಿರ್ಲಕ್ಷ್ಯದಿಂದಾಗಿ ಇವತ್ತು ಬೆಂಗಳೂರಿಗೆ ಕಂಟಕ ಎದುರಾಗಿದೆ. ಸೋಮವಾರ ಹಾಗೂ ಮಂಗಳವಾರ 148 ಮಿ.ಮಿ.ಮಳೆಯಾಗಿದೆ. ಕೆರೆಗಳಲ್ಲಿ ಹೂಳು ತೆಗೆದಿಲ್ಲ, ಕೆರೆಗಳು ಹಾಗೂ ರಾಜಕಾಲುವೆಗಳ ಒತ್ತುವರಿ ತೆರವು ಮಾಡದೆ ಇರುವುದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಗಾರಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ಬಾಧಿತ ಪ್ರದೇಶಗಳಲ್ಲಿ ಪರಿಶೀಲನೆ ಕೈಗೊಂಡು, ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ ನಲ್ಲೂರುಹಳ್ಳಿಯಲ್ಲಿರುವ ಕಾಂಗ್ರೆಸ್ ಮುಖಂಡ ನಲ್ಲೂರುಹಳ್ಳಿ ಟಿ.ನಾಗೇಶ್ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ರಾಜಕಾಲುವೆಗಳ ದುರಸ್ಥಿ, ವಿಸ್ತರಣೆಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಆದರೆ, ಮೂರು ವರ್ಷಗಳಿಂದ ಈ ಸಂಬಂಧ ಕ್ರಿಯಾ ಯೋಜನೆ ಮಾಡಿಲ್ಲ. ಯಮಲೂರಿನಲ್ಲಿ ರಸ್ತೆಗಳಲ್ಲಿ 4 ರಿಂದ 5 ಅಡಿ ನೀರು ನಿಂತಿದೆ. ಮಳೆ ಬಂದಾಗ 10 ರಿಂದ 12 ಅಡಿ ನೀರು ನಿಲ್ಲುತ್ತಿದೆ. ವಸತಿ ಪ್ರದೇಶಗಳಲ್ಲಿ ಜನರು ಬೋಟ್‍ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಬೆಂಗಳೂರಿನ ಈ ಅವ್ಯವಸ್ಥೆಗೆ ಹಿಂದಿನ ಸರಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಜೆಡಿಎಸ್-ಬಿಜೆಪಿ ಸರಕಾರ, ಆನಂತರ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಸರಕಾರ, ನಂತರ ನಮ್ಮ ಐದು ವರ್ಷಗಳ ಸರಕಾರ, ಮತ್ತೆ ಸಮ್ಮಿಶ್ರ ಸರಕಾರ, ಈಗ ಮೂರು ವರ್ಷಗಳಿಂದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಯಾರ ಯಾರ ಆಡಳಿತದ ಅವಧಿಯಲ್ಲಿ ಏನೇನು ಕೆಲಸಗಳಾಗಿವೆ ಎಂಬುದನ್ನು ದಾಖಲೆಗಳೆ ಹೇಳುತ್ತವೆ. ಅದನ್ನು ಜನರ ಮುಂದಿಡಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ನಮ್ಮ ಅಧಿಕಾರ ಅವಧಿಯಲ್ಲಿ ರಾಜಕಾಲುವೆಗಳ ಒತ್ತುವರಿ ಕುರಿತು ಸರ್ವೆ ಮಾಡಿಸಿ, ತೆರವು ಮಾಡಿಸಿದ್ದೇವೆ. 1953 ಒತ್ತುವರಿಗಳನ್ನು ಗುರುತಿಸಿ, 1300 ಒತ್ತುವರಿ ತೆರವು ಮಾಡಿದ್ದೇವೆ. ನಂತರ ಅಧಿಕಾರಕ್ಕೆ ಬಂದ ನೀವು ಯಾವುದೆ ಕೆಲಸ ಮಾಡಿಲ್ಲ. ಹಿಂದಿನ ಸರಕಾರದ ಮೇಲೆ ಆರೋಪ ಹೊರಿಸುವುದಲ್ಲ. ಮೂರು ವರ್ಷಗಳಲ್ಲಿ ನೀನು ಏನು ಮಾಡಿದ್ದೀಯಾ ಅದನ್ನು ಹೇಳು ಎಂದು ಮುಖ್ಯಮಂತ್ರಿಯನ್ನು ಅವರು ಪ್ರಶ್ನಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಯಾವ ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಇಲ್ಲಿ ಕಾನೂನು ಬಾಹಿರ ಲೈಸೆನ್ ಕೊಡಿಸಿರುವುದು ಯಾರು? ರಾಜಕಾಲುವೆಗಳ ವಿಸ್ತೀರ್ಣವನ್ನು ಚಿಕ್ಕದು ಮಾಡಿಸಿರುವುದು ಯಾರು? ಅಪಾಟ್ಮೆರ್ಂಟ್‍ಗಳನ್ನು ನಿರ್ಮಿಸಲು ಲೈಸೆನ್ಸ್ ಮಾಡಿಸಿರುವವರು ಯಾರು? ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಮಹಿಳೆಯೊಬ್ಬರು ಮನವಿ ಸಲ್ಲಿಸಲು ಬಂದಾಗ ಅದನ್ನು ಸ್ವೀಕರಿಸಿ, ಸರಿಯಾಗಿದ್ದರೆ ಅವರಿಗೆ ನೆರವು ನೀಡಬೇಕು, ತಪ್ಪಾಗಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು, ಮನವಿ ಪತ್ರವನ್ನು ಕಿತ್ತುಕೊಂಡು, ಅವಾಚ್ಯ ಶಬ್ದಗಳಿಂದ ಬೈದು, ಹೊಡೆಯಲು ಹೋಗುವುದು ಶಾಸಕರ ಲಕ್ಷಣ ಅಲ್ಲ. ಜನರ ಸಮಸ್ಯೆ ಆಲಿಸಲು ಸಾಧ್ಯವಾಗದಿದ್ದರೆ ಶಾಸಕರಾಗಲು ಅನರ್ಹ ಎಂದು ಸಿದ್ದರಾಮಯ್ಯ ಹೇಳಿದರು.
ನಲ್ಲೂರಹಳ್ಳಿ ರಾಜಕಾಲುವೆ ಪಕ್ಕದಲ್ಲಿ ಅಪಾರ್ಟ್ ಮೆಂಟ್ ಇದೆ. ಯಾರಿಗೋ ಸಹಾಯ ಮಾಡಲು ರಾಜಕಾಲುವೆ ಚಿಕ್ಕದು ಮಾಡಿ ರಸ್ತೆ ಮಾಡಿದ್ದಾರೆ. ಐಟಿ, ಬಿಟಿ ಕಂಪನಿಗಳು, ಅಪಾರ್ಟ್ ಮೆಂಟ್ ಗಳು ಬಂದ ನಂತರ ಅರವಿಂದ ಲಿಂಬಾವಳಿ ಬಹಳ ಚೆನ್ನಾಗಿ ಬೆಳೆದಿದ್ದಾರೆ. ಇದು ಒಳ್ಳೆಯ ಹುಲ್ಲುಗಾವಲು ಎಂದು ಅವರು ಟೀಕಿಸಿದರು.
ರೇನ್ ಬೋ ಕಾಲನಿಯಲ್ಲಿ ನೀರು ನಿಂತಿದೆ. ಜನ ಹೊರಗೆ ಬರಲು ಆಗುತ್ತಿಲ್ಲ. ಯಮಲೂರು, ಇಕೋ ಸ್ಪೇಸ್ ಎಲ್ಲಿ ನೋಡಿದರೂ ನೀರು ನಿಂತಿದೆ. ಬೆಳ್ಳಂದೂರಿನಲ್ಲಿ ಗೋಡೆ ಬಿದ್ದು ಮಸೀದಿಗೆ ನೀರು ನುಗ್ಗಿದೆ. ಬಿಬಿಎಂಪಿ ಹಾಗೂ ಸರಕಾರ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಸಿದ್ದಾಪುರದಲ್ಲಿ ಯುವತಿ ಅಖಿಲಾ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮೂರು ದಿನ ಆದರೂ ಅವರ ಕುಟುಂಬದವರಿಗೆ ಪರಿಹಾರ ಕೊಟ್ಟಿಲ್ಲ. ಬಿಬಿಎಂಪಿ ಹಾಗೂ ಕೆಇಬಿಯವರು ಪರಿಹಾರದ ವಿಚಾರಕ್ಕೆ ತಿಕ್ಕಾಟ ಮಾಡುತ್ತಿದ್ದಾರೆ. ಈ ವಿಚಾರಗಳನ್ನು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸರಕಾರದ ಅವಧಿಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ.ಖರ್ಚು ಮಾಡಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್.ವ್ಯಾಲಿ ಯೋಜನೆ ಜಾರಿ ಮಾಡದೆ ಇದ್ದಿದ್ದರೆ ಬೆಂಗಳೂರಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ನಮ್ಮ ಸರಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದಾಗಿ ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಾಗಾದರೆ ಮೂರು ವರ್ಷಗಳಿಂದ ಏನು ಮಾಡುತ್ತಿದ್ದೀರಾ? ಯಾರಿಗೆ ಹೆದರಿಸುತ್ತೀರಾ? ನಿಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಆಪಾದನೆಗಳು ಮಾಡುವುದಷ್ಟೇ ನಿಮ್ಮಿಂದ ಸಾಧ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ನಾಯಕ ನಲ್ಲೂರುಹಳ್ಳಿ ಟಿ.ನಾಗೇಶ್, ಬಿಬಿಎಂಪಿ ಮಾಜಿ ಸದಸ್ಯ ಉದಯ್ ಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







