ಮಂಗಳೂರು; ಮನಪಾ ವಿಪಕ್ಷ ನಾಯಕರಾಗಿ ನವೀನ್ ಡಿಸೋಜ ಆಯ್ಕೆ

ನವೀನ್ ಆರ್. ಡಿಸೋಜ
ಮಂಗಳೂರು, ಸೆ.8: ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕರಾಗಿ ನವೀನ್ ಆರ್. ಡಿಸೋಜ ಅವರನ್ನು ಆಯ್ಕೆ ಮಾಡಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಗುರುವಾರ ಆದೇಶ ಹೊರಡಿಸಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ರ ಅಧ್ಯಕ್ಷತೆಯಲ್ಲಿ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಪಕ್ಷದ ಮನಪಾ ಸದಸ್ಯರ ಒಪ್ಪಿಗೆಯೊಂದಿಗೆ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ವಸಂತ ಬಂಗೇರ, ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಉಮೇಶ್ ದಂಡಕೇರಿ, ಸುರೇಂದ್ರ ಕಾಂಬ್ಳಿ ಮತ್ತಿತರರು ಉಪಸ್ಥಿತರಿದ್ದರು.
2002ರಿಂದ ಬೆಂದೂರ್-38ನೇ ವಾರ್ಡ್ನಿಂದ ಸತತ 4ನೇ ಬಾರಿ ಮನಪಾ ಸದಸ್ಯರಾಗಿ ಚುನಾಯಿತರಾಗಿರುವ ನವೀನ್ ಆರ್. ಡಿಸೋಜ ಅಖಿಲ ಭಾರತ ಯುವ ಕಾಂಗ್ರೆಸ್ನ ರಾಷ್ಟ್ರೀಯ ಸಂಯೋಜಕರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಮನಪಾ ಸ್ಥಾಯಿ ಸಮಿತಿ, ತೆರಿಗೆ-ಹಣಕಾಸು ಹಾಗೂ ಆರೋಗ್ಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಸಂಯೋಜಕರಾಗಿ ಹಾಗೂ ಮಂಗಳೂರು ಕೆಥೋಲಿಕ್ ಧರ್ಮಪ್ರಾಂತದ ಸದಸ್ಯರಾಗಿದ್ದಾರೆ.







