ಕುಂದಾಪುರ; ಸ್ನೇಹಿತರಿಂದಲೇ ನಡೆಯಿತು ವಿನಯ ಪೂಜಾರಿ ಕೊಲೆ
ಕತ್ತು ಹಿಸುಕಿ ಕೊಂದ ಮೂವರ ಬಂಧನ

ವಿನಯ ಪೂಜಾರಿ (ಕೊಲೆಯಾದವರು), ಅಕ್ಷಯ, ಪ್ರವೀಣ ಪೂಜಾರಿ ಹಾಗೂ ಸತೀಶ್ ಪೂಜಾರಿ (ಆರೋಪಿಗಳು)
ಕುಂದಾಪುರ, ಸೆ.8: ತನ್ನ ಮನೆಯಿಂದ ಕಾಣೆಯಾಗಿ ವಾರದ ಬಳಿಕ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದ್ದು, ಶಂಕರನಾರಾಯಣ ಪೊಲೀಸರು ಕೊಲೆ ಪ್ರಕರಣದಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಚೌಕುಡಿಬೆಟ್ಟು ನಿವಾಸಿ ಯಾದ ವಿನಯ ಪೂಜಾರಿ (26) ಕೊಲೆಯಾದ ಯುವಕ. ಈ ಪುಕರಣದಲ್ಲಿ ಆರೋಪಿಗಳಾದ ಕುಂದಾಪುರ ಹಂಗಳೂರು ಹೊಸತಪ್ಲು ನಿವಾಸಿ ಅಕ್ಷಯ (28) ಬಸ್ರೂರು ಗುಂಡಿಗೋಳಿ ನಿವಾಸಿಗಳಾದ ಪ್ರವೀಣ್ ಪೂಜಾರಿ ಹಾಗೂ ಸತೀಶ್ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆ. ಮೂವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ವಿವರ: ವಿನಯ ಪೂಜಾರಿ ಮಾರ್ಚ್ 28ರಂದು ಮನೆಯಿಂದ ಕಾಣೆಯಾಗಿದ್ದರ ಬಗ್ಗೆ ಕುಂದಾಪುರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎ.4ರಂದು ಬೆಳಗ್ಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿ ವಾರಾಹಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಅದು ವಿನಯ ಪೂಜಾರಿಯ ಮೃತದೇಹ ಎಂದು ಆತನ ಚಹರೆಯ ಮೂಲಕ ಗುರುತಿಸಲಾಗಿತ್ತು. ಈಸಾವಿನ ಬಗ್ಗೆ ವಿನಯ್ ಮಾವ ಶೀನ ಪೂಜಾರಿ ಸಂಶಯ ಇರುವುದಾಗಿ ಎ.4ರಂದು ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಮರಣ ಪ್ರಕರಣ) ಅಡಿ ಕೇಸ್ ದಾಖಲಾಗಿತ್ತು.
ಮೃತದೇಹವನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸೆ.6ರಂದು ಮರಣೋತ್ತರ ಪರೀಕ್ಷೆಯಲ್ಲಿ ವಿನಯ ಪೂಜಾರಿಯನ್ನು ಕುತ್ತಿಗೆಯ ಭಾಗಕ್ಕೆ ಬಲವಾಗಿ ಒತ್ತಿದ್ದರಿಂದ ಸಾವು ಸಂಭವಿಸಿರುವುದಾಗಿ ವರದಿ ಬಂದಿತ್ತು.
ಈ ವರದಿಯನ್ನು ಸ್ವೀಕರಿಸಿದ ಬಳಿಕ ವಿನಯ ಪೂಜಾರಿಯ ಸಹೋದರಿ ವಿನಯ್ ಸಾವಿನಲ್ಲಿ ಅಕ್ಷಯ ಹಾಗೂ ಆತನ ಸ್ನೇಹಿತರ ಕೈವಾಡವಿದ್ದು ಇದೊಂದು ಕೊಲೆಯೆಂದು ದೂರು ನೀಡಿದ ಹಿನ್ನೆಲೆಯಲಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302, 201, 34ರಂತೆ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್.ನೇತೃತ್ವದಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ಉಪನಿರೀಕಕ್ಷಕ ಶ್ರೀಧರ ನಾಯ್ಕ್, ಕುಂದಾಪುರ ಪೊಲೀಸ್ ಉಪಾಧೀಕ್ಷರ (ಡಿವೈಎಸ್ಪಿ) ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ರಾಮು ಹೆಗ್ಡೆ, ರಾಘವೇಂದ್ರ ದೇವಾಡಿಗ, ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಸಂತೋಷ ಕುಮಾರ್, ಸಂತೋಷ ಕೆ.ಯು ಹಾಗೂ ಶಂಕರನಾರಾಯಣ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಗೋಪಾಲಕೃಷ್ಣ, ಮಂಜುನಾಥ, ರಾಘವೇಂದ್ರ, ಪುನೀತ್ ಕುಮಾರ ಶೆಟ್ಟಿ, ಆಲಿಂಗರಾಯ ಕಾಟೆ, ಜಯರಾಮ, ಸತೀಶ, ಚಂದ್ರ ಕುರ್ಮಾ ಕುಂದಾಪುರ ಗ್ರಾಮಾಂತರ ಠಾಣೆಯ ಮಧುಸೂದನ್, ಅನಿಲ್ ಕುಮಾರ್ ತಂಡ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







