ಅಮೃತಸರ:ತಂಬಾಕು ತಿನ್ನುತ್ತಿದ್ದ ವ್ಯಕ್ತಿಯ ಹತ್ಯೆ ಮಾಡಿದ ನಿಹಾಂಗ್ ಸಿಕ್ಖರು

ಅಮೃತಸರ(ಪಂಜಾಬ),ಸೆ.8: ಕಳೆದ ರಾತ್ರಿ ಇಲ್ಲಿಯ ಸ್ವರ್ಣಮಂದಿರದ ಬಳಿಯ ರಸ್ತೆಯಲ್ಲಿ ಇಬ್ಬರು ನಿಹಾಂಗ್ ಸಿಕ್ಖರು ಸೇರಿದಂತೆ ಮೂವರ ಗುಂಪು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಭೀಕರ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಧ್ಯರಾತ್ರಿಯ ಬಳಿಕ ಈ ಘಟನೆ ನಡೆದಿದ್ದು,ಮದ್ಯ ಸೇವಿಸಿದ್ದ ಮತ್ತು ತಂಬಾಕು ತಿನ್ನುತ್ತಿದ್ದ ಹರ್ಮನಜೀತ್ ಸಿಂಗ್ ಈ ಗುಂಪಿನಿಂದ ಕೊಲೆಯಾಗಿರುವ ವ್ಯಕ್ತಿಯಾಗಿದ್ದಾನೆ. ರಮಣದೀಪ ಸಿಂಗ್ ಎಂಬಾತನನ್ನು ಬಂಧಿಸಲಾಗಿದ್ದು,ಇಬ್ಬರು ನಿಹಾಂಗ್ ಸಿಕ್ಖರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಅರುಣ ಪಾಲ್ ಸಿಂಗ್ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹೋಟೆಲ್‌ವೊಂದರ ಹೊರಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸೆರೆಯಾಗಿದೆ. ಸ್ವರ್ಣಮಂದಿರದಿಂದ ಒಂದು ಕಿ.ಮೀ.ದೂರವೂ ಇಲ್ಲದ ಸ್ಥಳದಲ್ಲಿ ಹಲವಾರು ಜನರು ನಿಂತುಕೊಂಡಿದ್ದು ಮತ್ತು ಚರಂಡಿಯ ಬಳಿ ವ್ಯಕ್ತಿಯ ಶವ ಬಿದ್ದಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ಸಿಗುವವರೆಗೆ ಶವ ಅಲ್ಲಿಯೇ ಬಿದ್ದಿತ್ತು. ಕೊಲೆಯಾದ ವ್ಯಕ್ತಿಯು ನಗರದ ಚಟಿವಿಂಡ ಪ್ರದೇಶದ ನಿವಾಸಿಯಾಗಿದ್ದ. ದಾಳಿಕೋರರು ತನ್ನನ್ನು ಸಮೀಪಿಸಿದಾಗ ಆತ ತನ್ನ ಬೈಕ್ ಮೇಲೆ ಕುಳಿತುಕೊಂಡು ತಂಬಾಕು ತಿನ್ನುತ್ತಿದ್ದ ಎಂದು ಪೊಲೀಸರು ತಿಳಿಸಿದರು.







