ಉಕ್ರೇನ್ ಸಹಿತ ರಶ್ಯದ ಆಕ್ರಮಣದ ಭೀತಿ ಎದುರಿಸುತ್ತಿರುವ 18 ಯುರೋಪ್ ದೇಶಗಳಿಗೆ ನೆರವು ಹಂಚಿಕೆ
ಯುರೋಪ್‌ಗೆ ಅಮೆರಿಕ 2 ಶತಕೋಟಿ ಡಾಲರ್ ಸೇನಾ ನೆರವು

ಕೀವ್,ಸೆ.8: ಯುಕ್ರೇನ್ ಸೇರಿದಂತೆ ರಶ್ಯದಿಂದ ಬೆದರಿಕೆಯನ್ನು ಎದುರಿಸುತ್ತಿರುವ ಯುರೋಪ್‌ನ ಇತರ ರಾಷ್ಟ್ರಗಳಿಗೆ ಅಮೆರಿದ ಬೈಡನ್ ಆಡಳಿತವು 2 ಶತಕೋಟಿ ಡಾಲರ್ ವೌಲ್ಯದ ಸೇನಾ ನೆರವನ್ನು ಘೋಷಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಗುರುವಾರ ಉಕ್ರೇನ್ ರಾಜಧಾನಿ ಕೀವ್‌ಗೆ ಹಠಾತ್ ಭೇಟಿ ನೀಡಿದ ಸಂದರ್ಭ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಉಕ್ರೇನ್‌ನ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಬ್ಲಿಂಕೆನ್ ಅವರು, ನ್ಯಾಟೊ ಸದಸ್ಯ ರಾಷ್ಟ್ರಗಳು ಹಾಗೂ ಪ್ರಾದೇಶಿಕ ಭದ್ರತಾ ಪಾಲುದಾರ ರಾಷ್ಟ್ರಗಳು ಸೇರಿದಂತೆ ಭವಿಷ್ಯದಲ್ಲಿ ರಶ್ಯದಿಂದ ಆಕ್ರಮಣದ ಅಪಾಯವನ್ನು ಎದುರಿಸುತ್ತಿರುವ ಯುರೋಪ್‌ನ 18 ದೇಶಗಳಿಗೆ ದೀರ್ಘಾವಧಿಯ ವಿದೇಶಿ ಸೇನಾ ಹಣಕಾಸು ನೆರವು ಯೋಜನೆಯಡಿ 2 ಶತಕೋಟಿ ಡಾಲರ್ ಒದಗಿಸುವ ಬಗ್ಗೆ ಬೈಡನ್ ಆಡಳಿತವು ಅಮೆರಿಕ ಕಾಂಗ್ರೆಸ್‌ಗೆ ಅಧಿಸೂಚನೆಯನ್ನು ನೀಡಿದೆ ಎಂದು ತಿಳಿಸಿದರು.
ಅಮೆರಿಕ ಕಾಂಗ್ರೆಸ್‌ನ ಅನುಮೋದನೆಯ ನಿರೀಕ್ಷೆಯಲ್ಲಿರುವ ಈ ನಿಧಿಯಲ್ಲಿ ಸುಮಾರು 1 ಶತಕೋಟಿ ಡಾಲರ್ ಹಣವು ಉಕ್ರೇನ್ ದೇಶಕ್ಕೆ ಲಬ್ಯವಾಗಲಿದೆ ಹಾಗೂ ಉಳಿದ ಹಣವನ್ನು ಅಲ್ಬೇನಿಯ, ಬೋಸ್ನಿಯಾ, ಬಲ್ಗೇರಿಯ, ಕ್ರೋಯೆಷಿಯಾ, ಝೆಕ್ ರಿಪಬ್ಲಿಕ್, ಎಸ್ತೋನಿಯಾ, ಜಾರ್ಜಿಯಾ, ಗ್ರೀಸ್, ಕೊಸೋವೊ, ಲಾಟ್ವಿಯಾ, ಲಿಥುವಾನಿಯಾ, ಮೊಲ್ಡೊವಾ, ಮೊಂಟೆನಿಗ್ರೊ, ಉತ್ತರ ಮ್ಯಾಸಿಡೊನಿಯಾ, ಪೊಲ್ಯಾಂಡ್, ರೊಮೇನಿಯಾ,ಸ್ಲೊವಾಕಿಯಾ ಹಾಗೂ ಸ್ಲೊವೇಕಿಯಾ ನಡುವೆ ಹಂಚಲಾಗುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಣೆಯೊಂದರಲ್ಲ ತಿಳಿಸಿದೆ.
ಅಮೆರಿಕದ ಈ ಆರ್ಥಿಕ ಅನುದಾನದಿಂದಾಗಿ ಈ ದೇಶಗಳು ನ್ಯಾಟೊ ಜೊತೆಗಿನ ಸೇನಾ ಏಕೀಕರಣವನ್ನು ವೃದ್ಧಿಸುವ ಹಾಗೂ ರಶ್ಯದ ಪ್ರಭಾವ ಮತ್ತು ಆಕ್ರಮಣವನ್ನು ಎದುರಿಸುವ ಮೂಲಕ ತಮ್ಮ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಎದುರಾದ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ನೆರವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಜರ್ಮನಿಯ ರಾಮಸ್ಟೈನ್‌ನಲ್ಲಿ ಕಳೆದ ವಾರ ನಡೆದ ಸಮಾವೇಶವೊಂದಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್‌ಅವರು ಉಕ್ರೇನ್‌ಗೆ 675 ದಶಲಕ್ಷ ಡಾಲರ್ ವೌಲ್ಯದ ಭಾರೀ ಶಸ್ತ್ರಾಸ್ತ್ರ ಸಾಮಾಗ್ರಿಗಳ ಪ್ಯಾಕೇಜ್ ನೆರವನ್ನು ಘೋಷಿಸಿದ ಬೆನ್ನಲ್ಲೇ ಅಮೆರಿಕ ವಿದೇಶಿ ಸೇನಾ ನೆರವಿನ ಪ್ಯಾಕೇಜನ್ನು (ಘೋಷಿಸಿತ್ತು.
ಹೊವಿಟ್ಝರ್ ಫಿರಂಗಿಗಳು, ಶಸ್ತ್ರಾಸ್ತ್ರಗಳು, ಹಮ್ವಿ ವಾಹನಗಳು, ಕವಚಾವೃತ ಆ್ಯಂಬುಲೆನ್ಸ್‌ಗಳು, ಟ್ಯಾಂಕ್ ನಿರೋಧಕ ವ್ಯವಸ್ಥೆ ಇತ್ಯಾದಿ ಆ ಪ್ಯಾಕೇಜ್‌ನಲ್ಲಿ ಒಳಗೊಂಡಿದ್ದವು.







