ದೋಷಮುಕ್ತಿ ಕೋರಿ ಪಾಕ್ ಪ್ರಧಾನಿ ಶಹಬಾಝ್,ಪುತ್ರನಿಂದ ಕೋರ್ಟ್‌ಗೆ ಮನವಿ
ಕಪ್ಪುಹಣ ಬಿಳುಪು ಪ್ರಕರಣ

ಲಾಹೋರ್,ಸೆ.7: ಕೋಟ್ಯಂತರ ಡಾಲರ್ ವೌಲ್ಯದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತಗೊಳಿಸಬೇಕೆಂದು ಕೋರಿ ಪಾಕಿಸ್ತಾನ ಪ್ರಧಾನಿ ಶಹಬಾಝ್ ಶರೀಫ್ ಹಾಗೂ ಅವರ ಪುತ್ರ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಂಝಾ ಶಹಬಾಝ್ ಅವರು ಗುರುವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
14 ಶತಕೋಟಿ ಪಾಕ್ ರೂಪಾಯಿ ವೌಲ್ಯದ ಕಪ್ಪು ಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ)ಯ ವಿಶೇಷ ನ್ಯಾಯಾಲಯವು ಶಹಬಾಝ್ ಶರೀಫ್ ಹಾಗೂ ಅವರ ಪುತ್ರನ ವಿರುದ್ಧ ಇಂದು ದೋಷಾರೋಪಣೆಯನ್ನು ದಾಖಲಿಸಿಕೊಳ್ಳುವುದರಲ್ಲಿತ್ತು. ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತಿಗೊಳಿಸಬೇಕೆಂದು ಕೋರಿ ತನ್ನ ಕಕ್ಷಿದಾರರು ಅರ್ಜಿಯನ್ನು ಸಲ್ಲಿಸಿರುವುದಾಗಿ ಶಹಬಾಝ್ ಶರೀಫ್ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಲು. ಅಲ್ಲದೆ ಪ್ರಧಾನಿಯವರು ನೆರೆಪರಿಹಾರ ಚಟುವಟಿಕೆಗಳಲ್ಲಿ ವ್ಯತ್ಯಸ್ತನಾಗಿರುವುದರಿಂದ ಅವರಿಗೆೆ ಬುಧವಾರದ ನ್ಯಾಯಾಲಯ ಕಲಾಪಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲವೆಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶ ಇಜಾಝ್ ಅವಾನ್ ಅವರು ನ್ಯಾಯಾಲಯದ ಆಲಿಕೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರಧಾನಿಯವರಿಗೆ 10 ನಿಮಿಷಗಳ ಬಿಡುವು ಮಾಡಿಕೊಳ್ಳಲು ಯಾಕೆ ಸಾಧ್ಯವಾಗಿಲ್ಲವೆಂದು ಅವರ ವಕೀಲ ಅಮ್ಜದ್ ಪರ್ವೇಝ್‌ರನ್ನು ಪ್ರಶ್ನಿಸಿದರು.
ಆಗ ನ್ಯಾಯವಾದಿ ಅಮ್ಜದ್ ಅವರು ಮುಂದಿನ ಆಲಿಕೆಯಲ್ಲಿ ಪ್ರಧಾನಿಯವರ ಉಪಸ್ಥಿತಿಯನ್ನು ಖಾತರಿಪಡಿಸಿಕೊಳ್ಳಲು ಯತ್ನಿಸುವುದಾಗಿ ತಿಳಿಸಿದರು. ಹಣ ಕಪ್ಪುಬಿಳುಪು ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತಗೊಳಿಸಬೇಕೆಂದು ಕೋರಿ ಪ್ರಧಾನಿ ಶಹಬಾಝ್ ಶರೀಫ್ ಹಾಗೂ ಅವರ ಪುತ್ರ ಹಂಝಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 17ರಂದು ಕೈಗೆತ್ತಿಕೊಳ್ಳಲಿದ್ದು, ಅಲ್ಲಿಯವರೆಗೆ ನ್ಯಾಯಾಧೀಶರು ಪ್ರಕರಣದ ಆಲಿಕೆಯನ್ನು ಮುಂದೂಡಿದರು.
14 ಶತಕೋಟಿ ಡಾಲರ್ ಪಾಕ್ ರೂ.ಗೂ ಅಧಿಕ ವೌಲ್ಯದ ಕಪ್ಪುಹಣವನ್ನು ಬಿಳುಪುಗೊಳಿಸಿದ ಆರೋಪಕ್ಕೆ ಸಂಬಂಧಿಸಿ ಶಹಬಾಝ್ ಶರೀಫ್ ಹಾಗೂ ಅವರ ಪುತ್ರರಾದ ಹಂಝಾ ಹಾಗೂ ಸುಲೇಮಾನ್ ಅವರ ವಿರುದ್ಧ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆಯು, 2019ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಕಪ್ಪುಹಣ ಬಿಳುಪು ತಡೆ ಕಾಯ್ದೆ ಸೇರಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.
ಪ್ರಕರಣದ ಆರೋಪಿಗಳಲ್ಲೊಬ್ಬರಾದ ಶಹಬಾಝ್‌ರ ಕಿರಿಯ ಪುತ್ರ ಸುಲೇಮಾನ್ 2019ರಿಂದೀಚೆಗೆ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.







