ನನ್ನಷ್ಟು ಉತ್ತಮ ಗೆಳೆಯ ಭಾರತಕ್ಕೆ ಹಿಂದೆಂದೂ ಇರಲಿಲ್ಲ :ಡೊನಾಲ್ಡ್ ಟ್ರಂಪ್

ನ್ಯೂಜೆರ್ಸಿ,ಸೆ.8: ಪ್ರಧಾನಿ ನರೇಂದ್ರ ಮೋದಿಯವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಭಾರತವು ಹಿಂದೆಂದೂ ತನಗಿಂತ ಉತ್ತಮ ಗೆಳೆಯನನ್ನು ಹೊಂದಿರಲಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಎನ್‌ಡಿಟಿವಿ ಸುದ್ದಿಸಂಸ್ಥೆಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
‘‘ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದು ಪ್ರತಿಯೊಬ್ಬರೂ ಭಾವಿಸುತ್ತಿದ್ದಾರೆ. ಈ ಬಗ್ಗೆ ನಾನು ನಿಕಟಭವಿಷ್ಯದಲ್ಲಿ ನಿರ್ಧಾರವೊಂದನ್ನು ಕೈಗೊಳ್ಳುವ ಸಾಧ್ಯತೆಯಿದೆ’’ ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್ ಸಮೀಪದ ಬೆಡ್‌ಮಿನಿಸ್ಟರ್‌ನಲ್ಲಿರುವ ಗಾಲ್ಫ್ ಕ್ಲಬ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಥವಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮುಂತಾದವರಿಗಿಂತ ಭಾರತದ ಜೊತೆ ತನ್ನ ಸಂಬಂಧ ಉತ್ತಮವಾಗಿತ್ತು ಎಂದು ತಾವು ಭಾವಿಸುತ್ತೀರಾ ಎಂಬ ಪ್ರಶ್ನೆಗೆ, ಟ್ರಂಪ್ ಅವರು ‘‘ಈ ಪ್ರಶ್ನೆಯನ್ನು ನೀವು ಪ್ರಧಾನಿ ಮೋದಿಯವರಿಗೆ ಕೇಳಬೇಕು. ಆದರೆ ಅಧ್ಯಕ್ಷ ಟ್ರಂಪ್ ಜೊತೆಗಿದ್ದಷ್ಟು ಉತ್ತಮ ಸಂಬಂಧವನ್ನು ನೀವು ಯಾವತ್ತೂ ಹೊಂದಿರಲಿಲ್ಲ ಎಂದು ನಾನು ಭಾವಿಸುವೆ ’’ಎಂದು ಟ್ರಂಪ್ ತಿಳಿಸಿದರು.
‘‘ಭಾರತ ಹಾಗೂ ಪ್ರಧಾನಿ ಮೋದಿ ಜೊತೆ ನನ್ನ ಬಾಂಧವ್ಯ ಅತ್ಯುತ್ತಮವಾಗಿತ್ತು. ನಾವು ಉತ್ತಮ ಸ್ನೇಹಿತರಾಗಿದ್ದೆವು. ದೀರ್ಘಸಮಯದಿಂದ ನಾನು ಅವರನ್ನು ಬಲ್ಲೆ. ಆತ ಉತ್ತಮ ಮನುಷ್ಯ’’ ಎಂದು ಟ್ರಂಪ್ ಪ್ರಧಾನಿ ಮೋದಿಯವರನ್ನು ಪ್ರಶಂಸಿಸಿದ್ದಾರೆ.
2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಸಿದ್ಧತೆ ಮಾಡಿಕೊಳ್ಳುತ್ತಿರುವೆನಾದಜರೂ, ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ತಿಯಾಗಿ ತನ್ನ ಪುತ್ರಿ ಇವಾಂಕಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ಟ್ರಂಪ್ ತಳ್ಳಿಹಾಕಿದರು.
2019ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ಬೃಹತ್ ಹೌಡಿ, ಮೋದಿ ರ್ಯಾಲಿಯನ್ನು ಉದ್ದೇಶಿಸಿ ಬಾಷಣ ಮಾಡಿದ್ದರು. ಆ ಸಬೆಯಲ್ಲಿ ಮೋದಿ, ‘‘ ಆಬ್ ಕಿ ಬಾರ್, ಟ್ರಂಪ್ ಸರಕಾರ್’ ಎಂದು ಹೇಳಿರುವುದು ವಿಶ್ವದ ಗಮನಸೆಳೆದಿತ್ತು.
ಐದು ತಿಂಗಳುಗಳ ಬಳಿಕ ಟ್ರಂಪ್ ಅವರು ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ಗೆ ಭೇಟಿ ನೀಡಿದ್ದರು. ಅಹ್ಮದಾಬಾದ್ ನೂತನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬೃಹತಸಭೆಯನ್ನು ಉದ್ದೇಶಿಸಿ ಈ ಇಬ್ಬರು ನಾಯಕರು ಭಾಷಣ ಮಾಡಿದ್ದರು..