ಹೀಗೊಂದು ‘ಡಿಜಿಟಲ್ ಉಪವಾಸ’:24 ಗಂಟೆ ಸ್ಮಾರ್ಟ್‌ಫೋನ್,ಇಂಟರ್ನೆಟ್‌ನಿಂದ ದೂರ

ಭೋಪಾಲ.ಸೆ.8: ಮಧ್ಯಪ್ರದೇಶದ ರೈಸೆನ್ ಜಿಲ್ಲೆಯ ಬೇಗಮ್‌ಗಂಜ್‌ನಲ್ಲಿ ಜೈನ ಸಮುದಾಯದ ಸುಮಾರು 100 ಸದಸ್ಯರು ಬುಧವಾರ ‘ಪರ್ಯೂಷಣ ಪರ್ವ ’ ಉತ್ಸವದ ಅಂಗವಾಗಿ ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್‌ನೆಟ್‌ನಿಂದ ದೂರವಿದ್ದು,24 ಗಂಟೆಗಳ ‘ಡಿಜಿಟಲ್ ಉಪವಾಸ ’ವನ್ನು ಕೈಗೊಂಡಿದ್ದರು.
ಇವರೆಲ್ಲ ಬುಧವಾರ ಬೆಳಿಗ್ಗೆ ಉಪವಾಸವನ್ನು ಆರಂಭಿಸುವ ಮುನ್ನ ತಮ್ಮ ಸ್ಮಾರ್ಟ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ದೇವಸ್ಥಾನದಲ್ಲಿ ಇರಿಸಿದ್ದರು.
ಸ್ವಯಂ ಶುದ್ಧೀಕರಣ,ಆತ್ಮಾವಲೋಕನ ಮತ್ತು ಆಧ್ಯಾತಿಕ ಬೆಳವಣಿಗೆಗಾಗಿ ಜೈನ ಸಮುದಾಯವು ಪ್ರತಿ ವರ್ಷ ಪರ್ಯೂಷಣ ಪರ್ವವನ್ನು ಆಚರಿಸುತ್ತದೆ. ಇಂದು ವ್ಯಸನವಾಗಿ ಪರಿಣಮಿಸಿರುವ ಸ್ಮಾರ್ಟ್‌ಪೋನ್ ಮತ್ತು ಇಂಟರ್ನೆಟ್‌ನಿಂದ ದೂರವಿರಲು ತಾವು ಡಿಜಿಟಲ್ ಉಪವಾಸವನ್ನು ಆಚರಿಸಿದ್ದಾಗಿ ತಿಳಿಸಿದ ಸ್ಥಳೀಯ ಜೈನ ಸಮುದಾಯದ ನಾಯಕ ಅಕ್ಷಯ ಜೈನ್,ಜನರು ಈ ವ್ಯಸನದಿಂದ ದೂರವಿರುವಂತಾಗಲು ಇಂಟರ್ನೆಟ್ ಇಲ್ಲದೆ ಡಿಜಿಟಲ್ ಉಪವಾಸದ ಉಪಕ್ರಮವನ್ನು ಆರಂಭಿಸಲಾಗಿದೆ ಎಂದರು.
ಯುವಜನರು ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮ,ಆನ್‌ಲೈನ್ ಗೇಮ್‌ಗಳು ಮತ್ತು ಪೊರ್ನೊಗ್ರಫಿಯ ಗೀಳನ್ನು ಬೆಳೆಸಿಕೊಂಡಿರುವದರಿಂದ ಡಿಜಿಟಲ್ ಉಪವಾಸವನ್ನು ಆಚರಿಸಲು ಮತ್ತು ಅವರಲ್ಲಿ ಜಾಗ್ರತಿಯನ್ನು ಮೂಡಿಸಲು ನಿರ್ಧರಿಸಲಾಗಿದೆ ಎಂದು ಸಮುದಾಯದ ಇನ್ನೋರ್ವ ನಾಯಕ ಅಜಯ ಜೈನ್ ಹೇಳಿದರು.





