ನಾರಾಯಣ ಗುರುಗಳ ಧಾರ್ಮಿಕ, ಸಾಮಾಜಿಕ ಕ್ರಾಂತಿಯ ವೈಶಿಷ್ಟ
ಇಂದು ನಾರಾಯಣ ಗುರು ಜಯಂತಿ

ನಾರಾಯಣಗುರು ಸ್ಥಾಪಿಸಿದ ದೇಗುಲಗಳಲ್ಲಿ ಯಾವುದೇ ಪ್ರಚಾರದ ಅಬ್ಬರಗಳಿಲ್ಲ. ಸರಳವಾದ ಭಕ್ತಿ, ಶ್ರದ್ಧಾಪೂರ್ವಕ ಪ್ರಾರ್ಥನೆ ಮುಖ್ಯವಾಗಿತ್ತು. ದೇವಳಗಳು ಭಕ್ತಿ ಕೇಂದ್ರಗಳಾಗುವ ಜೊತೆಗೆ ಸಾಮಾಜಿಕ ಕ್ರಾಂತಿಯ ಕಾರ್ಯಕ್ಷೇತ್ರಗಳೂ ಆದವು. ಅವರ್ಣರು ತಮ್ಮ ಉನ್ನತಿಗಾಗಿ ಕ್ರಿಯಾಯೋಜನೆ ತಯಾರಿಸಲು ಕಾರಣಗಳಾದವು. ಹೆಚ್ಚಿನ ದೇವಳಗಳ ಜೊತೆ ಶೈಕ್ಷಣಿಕ ಕೇಂದ್ರಗಳೂ ಸ್ಥಾಪನೆಗೊಂಡು ಅಭಿವೃದ್ಧಿಗೆ ಹೊಸ ಆಯಾಮಗಳನ್ನು ತಂದವು.
ಬ್ರಹ್ಮಶ್ರೀ ನಾರಾಯಣ ಗುರುಗಳ ಧಾರ್ಮಿಕ, ಸಾಮಾಜಿಕ ಕ್ರಾಂತಿಯ ಬಗ್ಗೆ ತಿಳಿಯುವ ಮೊದಲು ಅವರ ಕ್ರಾಂತಿ ನಮ್ಮ ದೇಶ ಕಂಡ ಇತರ ಸಂತರಿಗಿಂತ ಹೇಗೆ ಭಿನ್ನವಾಗಿತ್ತೆಂದು ನೋಡೋಣ. ನಮ್ಮ ಭಾರತ ಪುರಾತನ ಕಾಲದಿಂದಲೂ ಅನೇಕ ಋಷಿಮುನಿಗಳನ್ನೂ ಕಂಡಿದೆ. ಇಲ್ಲಿ ಒಂದು ಅಂಶ ನಮಗೆ ವಿಷದವಾಗುತ್ತದೆ. ಅದೇನೆಂದರೆ ನಮ್ಮ ಹೆಚ್ಚಿನ ಎಲ್ಲಾ ಸಂತರು ಸಮಾಜದ ಮೇಲ್ವರ್ಗದಿಂದ ಬಂದವರು. ಅವರು ತಮ್ಮ ಸಾಧನೆಯ ಹಾದಿಯಲ್ಲಿ ಒಂದು ಹಂತವನ್ನು ಮುಟ್ಟಿದ ನಂತರ ಅಲ್ಲಿಂದ ಕೆಳಗಿಳಿಯದೆ ಅಲ್ಲೇ ಉಳಿಯುತ್ತಾರೆ. ಹೆಚ್ಚಿನವರು ತಮ್ಮದೇ ಆದ ಮತವನ್ನೋ, ಶಿಷ್ಯವರ್ಗವನ್ನೋ ಕಟ್ಟಿ ಆ ದಂತಗೋಪುರದಲ್ಲೇ ಉಳಿಯುತ್ತಾರೆ. ಅವರಿಗೆ ಸಮಾಜದ ನಿಮ್ನವರ್ಗದ ಜನರ ನೋವು, ಸಂಕಟ ಕಾಣದು. ಅವರು ತಮ್ಮನ್ನು ಜನಸಾಮಾನ್ಯರೊಂದಿಗೆ ಗುರುತಿಸಿಕೊಳ್ಳದೆ ತಮ್ಮದೇ ಲೋಕದಲ್ಲಿ ಜನರಿಂದ ದೂರವಾಗಿಯೇ ಉಳಿಯುತ್ತಾರೆ. ಸಾಮಾಜದ ಓರೆಕೋರೆ, ಕುಂದುಕೊರತೆ ಅವರನ್ನು ಮುಟ್ಟದು. ನೊಂದವರ ಆರ್ತನಾದ ಅವರಿಗೆ ಕೇಳದು.
ನಾರಾಯಣ ಗುರುಗಳ ವಿಷಯಕ್ಕೆ ಬಂದಾಗ ಅವರು ಹುಟ್ಟಿದ್ದೇ ಕೇರಳದ ಒಂದು ಹಿಂದುಳಿದ ವರ್ಗದ ಮನೆಯಲ್ಲಿ.
ಅವರಿಗೆ ಯಾವ ವೈದಿಕ ಸಂಸ್ಕಾರಗಳೂ ಆಗಿರುವುದಿಲ್ಲ. ಆದರೆ ಜನ್ಮತಃ ಬಂದಿದ್ದ ಒಂದು ವೈರಾಗ್ಯಭಾವ ಅವರನ್ನು ಊರು ತೊರೆದು ಸಂಬಂಧವನ್ನು ಕಳಚಿ ತಪಸ್ಸಿಗಾಗಿ ಹೋಗುವಂತೆ ಪ್ರೇರೇಪಿಸುತ್ತದೆ. ಅವರು ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಮರುತ್ವಮಲೈ ಎಂಬ ಬೆಟ್ಟದಲ್ಲಿ ಎಂಟು ವರ್ಷಗಳ ಕಾಲ ಧ್ಯಾನಸ್ಥರಾಗುತ್ತಾರೆ. ಕೇವಲ ಎಲೆಗಳ ರಸವನ್ನು ಕುಡಿದು ಬದುಕು ಸವೆಸುತ್ತಾರೆ. ಮುಂದೆ ಅವರಿಗೆ ಜ್ಞಾನೋದಯವಾದಾಗ ಅವರು ಆ ದಂತಗೋಪುರದಲ್ಲೇ ಕುಳಿತಿಲ್ಲ. ಬೆಟ್ಟದಿಂದ ಇಳಿದವರು ತನ್ನನ್ನು ದಲಿತರೊಂದಿಗೆ ಸಮೀಕರಿಸುತ್ತಾರೆ. ಅವರೊಂದಿಗೆ ತನ್ನನ್ನು ಗುರುತಿಸಿ ಅವರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾರೆ. ಸಮಾಜದಲ್ಲಿ ಪ್ರಚಲಿತವಿದ್ದ ವೌಢ್ಯ, ಅಸಮಾನತೆ, ಅಸ್ಪಶ್ಯತೆಗಳ ವಿರುದ್ಧ ಹೋರಾಡುತ್ತಾರೆ. ಬಡವರಿಗಾಗಿ, ಶೋಷಿತರಿಗಾಗಿ ವಿದ್ಯಾನಿಲಯಗಳನ್ನೂ, ಆರೋಗ್ಯ ಕೇಂದ್ರಗಳನ್ನೂ ತೆರೆಯುತ್ತಾರೆ.
‘ಶಿಕ್ಷಣದಿಂದ ಮುಕ್ತಿ ಸಂಘಟನೆಯಿಂದ ಶಕ್ತಿ’ ಎಂಬ ಮಾತಿನಂತೆ ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಾರೆ. ಇಂದು ಜಗತ್ತಿನಾದ್ಯಂತ 150 ಶೈಕ್ಷಣಿಕ-ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅದಕ್ಕಿಂತಲೂ ಮುಖ್ಯವಾಗಿ ದಲಿತರಿಗೆ ದೇವಾಲಯ ಪ್ರವೇಶ ನಿಷಿದ್ಧವಿದ್ದ ಕಾಲದಲ್ಲಿ ದಲಿತರಿಗಾಗಿ ಅವರು 40ಕ್ಕೂ ಹೆಚ್ಚು ದೇವಸ್ಥಾನಗಳನ್ನು ಪ್ರತಿಷ್ಠಾಪಿಸುತ್ತಾರೆ. ಅರವೀಪುರಂನಲ್ಲಿ ಪ್ರಥಮ ಶಿವಲಿಂಗ ಪ್ರತಿಷ್ಠಾಪಿಸಿದಾಗ ಅಲ್ಲಿಯ ನಂಬೂದಿರಿ ಬ್ರಾಹ್ಮಣರು ಆಕ್ಷೇಪ ಎತ್ತುತ್ತಾರೆ. ಅದಕ್ಕೆ ಗುರು ಏನನ್ನುತ್ತಾರೆ ಗೊತ್ತೇ? ‘‘ನಾನು ಬ್ರಾಹ್ಮಣ ಶಿವನನ್ನಲ್ಲ-ಶೂದ್ರ ಶಿವನನ್ನೇ ಪ್ರತಿಷ್ಠಾಪಿಸಿದ್ದೇನೆ’’ ಎಂದು ಅವರ ಬಾಯಿ ಮುಚ್ಚಿಸುತ್ತಾರೆ. 1912ರಲ್ಲಿ ದ.ಕ.ದ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥ ದೇವಾಲಯವನ್ನು ಪ್ರತಿಷ್ಠಾಪಿಸುತ್ತಾರೆ. ಸಾತ್ವಿಕ ಕ್ರಾಂತಿ ಮಾಡಿದ ಅವರು ಕಳೆದ ಶತಮಾನ ಕಂಡ ಅತ್ಯಂತ ಮಾನವೀಯ ಸಂತ.
ಗುರುಗಳ ಸಾಮಾಜಿಕ ಕ್ರಾಂತಿಯ ವೈಶಿಷ್ಟಗಳು ಕೇರಳದ ಆಗಿನ ಸಾಮಾಜಿಕ ಸ್ಥಿತಿಯ ಮೇಲೆ ನಿರ್ಧಾರವಾಗಿದೆ. ಗುರುಗಳ ಕ್ರಾಂತಿಯ ಬಗ್ಗೆ ಹೇಳುವ ಮೊದಲು 19ನೇ ಶತಮಾನದಲ್ಲಿ ಕೇರಳದಲ್ಲಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಒಂದೆರಡು ವಿಷಯ ಹೇಳುವುದು ಪ್ರಸಕ್ತವೆನಿಸುತ್ತದೆ. ಆಕಾಲದಲ್ಲಿ ಅಲ್ಲಿ ಭೇಟಿಯಿತ್ತಿದ್ದ ಸ್ವಾಮಿ ವಿವೇಕಾನಂದರು ಅಲ್ಲಿನ ಸಾಮಾಜಿಕ ಸ್ಥಿತಿಯ ಬಗ್ಗೆ ಉಚ್ಚರಿಸಿದ ಮಾತು- ‘ಕೇರಳ ಎಂಬುದು ಮತೀಯ ಭ್ರಾಂತರ ಸಂತೆ-An Asylum’ ಎಂದು. ಅಷ್ಟೊಂದು ಕೆಟ್ಟ ದುರಂತ ಮಯ ಪರಿಸ್ಥಿತಿ ಅಲ್ಲಿತ್ತು. ಅಲ್ಲಿನ ಸಾಮಾನ್ಯ ಜನರಲ್ಲಿ ಅಂಧಶ್ರದ್ಧೆ-ಮೂಢನಂಬಿಕೆಗಳನ್ನು ಬಿತ್ತಲಾಗಿತ್ತು. ಅಸ್ಪಶ್ಯತೆ ಶಾಸ್ತ್ರಸಮ್ಮತವಾಗಿತ್ತು. ಬ್ರಾಹ್ಮಣ ನಂಬೂದಿರಿಗಳಿಂದ ದಲಿತನಾದ ಪರಯ 64 ಹೆಜ್ಜೆ ದೂರ, ಪುಲಯ 54 ಹೆಜ್ಜೆ ಹಾಗೂ ಶೂದ್ರರಾದ ಈಳವರು 36 ಹೆಜ್ಜೆಗಳಷ್ಟು ದೂರದಲ್ಲಿ ನಡೆಯಬೇಕಿತ್ತು. ಸವರ್ಣರು ನಡೆಯುವಾಗ ‘ಹೇ’ ಎಂದು ಸದ್ದು ಮಾಡುತ್ತಿದ್ದರು. ಈ ಸದ್ದು ಕೇಳಿದ ಅಸ್ಪಶ್ಯರು ಬದಿಗೆ ಸರಿದು ಕುಕ್ಕರಗಾಲಿನಲ್ಲಿ ಕುಳಿತಿರಬೇಕಿತ್ತು. ಇದಕ್ಕೆ ತಪ್ಪಿದರೆ ಅವರ್ಣರನ್ನು ಶಿಕ್ಷಿಸುವ ಅಧಿಕಾರ ಸವರ್ಣರಿಗಿತ್ತು. ಜೊತೆಗೆ ಅವರ್ಣರ ಹೆಂಗಸಾಗಲಿ ಗಂಡಸಾಗಲಿ ತಮ್ಮ ಎದೆ ಮೇಲಿನ ವಸ್ತ್ರ ತೆಗೆದು ನಿಲ್ಲಬೇಕಿತ್ತು. ಅವರಿಗೆ ಕೊಡೆ, ಚಪ್ಪಲಿ, ಚಿನ್ನದ ಒಡವೆ, ಆರ್ಥಿಕ ವಲಯಗಳಲ್ಲಿ ಸಾಕಷ್ಟು ನಿಷೇಧಗಳನ್ನು ಹೇರಿ ಅವರ್ಣರ ಕರ್ತೃತ್ವಶಕ್ತಿಯನ್ನು, ಯೋಚನಾಶಕ್ತಿಯನ್ನು ತುಂಡರಿಸಿ ಅವರಿಗೆ ಸಾಮಾನ್ಯ ಜೀವನ ಅಲಭ್ಯವಾಗಿತ್ತು.
ಕೇರಳದಲ್ಲಿ ‘untouchable’ ಅಂದರೆ ಅಸ್ಪಶ್ಯರಲ್ಲದೆ ‘unseable’ ಎಂದರೆ ನೋಟಕ್ಕೂ ಅನರ್ಹರೆನಿಸಿದವರೂ ಇದ್ದರು. ತಮ್ಮ ದೃಷ್ಟಿ ಹರಿಸಿದಲ್ಲಿ ಅಪವಿತ್ರತೆಯನ್ನು ಹರಡುವವರು ಎಂದು ಹೇಳಲಾದ ಇವರನ್ನು ನಾಯಾಡಿಗಳೆಂದು ಕರೆಯಲಾಗುತ್ತಿತ್ತು. ಅವರು ತಮ್ಮ ಭಿಕ್ಷಾಪಾತ್ರೆಯನ್ನು ಬೀದಿ ಬದಿಗಿಟ್ಟು ಪೊದರುಗಳೆಡೆಯಲ್ಲಿ ಅಡಗಿರಬೇಕಾಗಿತ್ತು. ದಾರಿಹೋಕರು ಭಿಕ್ಷೆ ಹಾಕಿದಾಗ ಅವರು ದೂರ ಸರಿದ ಮೇಲೆ ಹೊರಬಂದು ಭಿಕ್ಷಾಪಾತ್ರೆ ಹಿಡಿದು ಹತ್ತಿರದ ಕಾಡಿಗೆ ಓಡಬೇಕಾಗಿತ್ತು. ಇದು ಅಸ್ಪಶ್ಯತೆಯ ಪರಾಕಾಷ್ಟೆ.
ಇದರ ಜೊತೆ ಶೂದ್ರರಿಗೆ ಮತ್ತು ದಲಿತರಿಗೆ ಅಮಾನುಷವಾದ ಕರಗಳನ್ನು ಹೇರಲಾಗಿತ್ತು. ಜಾತಿಯ ಟ್ಯಾಕ್ಸ್, ದೇಹದ ಭಾಗಗಳ ಮೇಲೆ ಟ್ಯಾಕ್ಸ್, 16ರಿಂದ 60ರ ವರೆಗಿನ ಗಂಡಸಿಗೆ ತಲೆ ಕಂದಾಯ ಇವೆಲ್ಲ ಪ್ರಚಲಿತವಿದ್ದವು. ಅದಕ್ಕಿಂತಲೂ ಕರಾಳವಾದ ಕಂದಾಯ ಎಂದರೆ ಮೊಲೆಯೂಡಿಸುವ ತಾಯಿ ಕೊಡಬೇಕಾದ ಬ್ರೆಸ್ಟ್ ಟ್ಯಾಕ್ಸ್, ಕರನಿರ್ವಹಣಾಧಿಕಾರಿಗಳು ತಾಯಿಯನ್ನು ಪರೀಕ್ಷಿಸಿ ಅವಳ ಎದೆಯಳತೆ ಮಾಡಿ ಟ್ಯಾಕ್ಸ್ ಹೇರಲಾಗುತ್ತಿತ್ತು. ಶಿರ್ತಾಳಿ ಪ್ರದೇಶದ ಒಬ್ಬ ಈಳವ ಮಹಿಳೆ ಬಹಳ ಬಡವಳಾಗಿದ್ದರಿಂದ ಈ ಟ್ಯಾಕ್ಸ್ ಕೊಡಲು ಸಾಧ್ಯವಾಗದ್ದರಿಂದ ಅವಳಿಗೆ ಮಗುವಿಗೆ ಮೊಲೆಯೂಡಿಸಲು ಬಿಡಲಿಲ್ಲ. ಆಕೆ ಆ ಅಧಿಕಾರಿಯ ಎದುರು ತನ್ನೆರಡೂ ಮೊಲೆಗಳನ್ನು ಕತ್ತರಿಸಿ ಒಗೆದು ಈಗ ನಾನು ಟ್ಯಾಕ್ಸ್ ಕೊಡುವಂತಿಲ್ಲ ಎಂದು ನೆಲದಲ್ಲಿ ನರಳಾಡಿ ಸತ್ತಳಂತೆ. ಈ ಜಾಗ ‘ಮೊಲಚ್ಚಿ ಪರಂಬು’ ಎಂದರೆ ‘ಲ್ಯಾಂಡ್ ಆಫ್ ದಿ ಬ್ರೆಸ್ಟ್ಸ್’ ಎಂದು ಇಂದಿಗೂ ಕರೆಯಲ್ಪಡುತ್ತದೆ. ಹಕ್ಕೊತ್ತಾಯ, ವಾದಮಂಡನೆಗಳ ಪ್ರತಿಫಲವಾಗಿ 1865ರಲ್ಲಿ ಬ್ರಿಟಿಷ್ ಸರಕಾರ 105 ಇಂತಹ ಕರಗಳನ್ನು ಮನ್ನಾ ಮಾಡಿತು. ಆದರೆ ಭೂಮಿಯ ಮೇಲಿನ ದೇವದೂತರೆಂದು ಕರೆಸಿಕೊಳ್ಳುತ್ತಿದ್ದ ನಂಬೂದಿರಿಗಳಿಗೆ ಯಾವ ಕರಗಳೂ ಇರಲಿಲ್ಲ ಹಾಗೂ ಸಮಾಜದ ಸುಂದರ ಅವರ್ಣ ಯುವತಿಯರೆಲ್ಲ ಅವರ ಸ್ವತ್ತಾಗಿಸುವ ದೇವದಾಸಿ ಪದ್ಧತಿ ಜಾರಿಯಲ್ಲಿತ್ತು. ಈ ವರ್ಣದ್ವೇಷದ ವಿರುದ್ಧ ಸಾತ್ವಿಕವಾಗಿ ಪ್ರತಿರೋಧ ಮಾಡಿ ಕಾನೂನು ಪ್ರಕಾರ ಮುಂದುವರಿದು ಹಲವಾರು ಕ್ರಾಂತಿಕಾರಿ ಹೆಜ್ಜೆಗಳಿಗೆ ಕಾರಣರಾದವರು ಶ್ರೀ ನಾರಾಯಣ ಗುರುಗಳು. ಅವರ ಪ್ರಮುಖ ಕ್ರಾಂತಿಕಾರಿ ಹೆಜ್ಜೆಗಳು ಹೀಗಿವೆ:
ಮೂಢನಂಬಿಕೆ ಅಂಧಶ್ರದ್ಧೆಗಳ ವಿರುದ್ಧ ಹೋರಾಟದ ವಿಭಿನ್ನ ಮಜಲುಗಳು:
1) ಮದ್ಯಪಾನ ನಿಷೇಧ: ಕೇರಳದ ಈಳವರು ತಮ್ಮ ಮೂರ್ತೆದಾರಿಕೆಯಿಂದಾಗಿ ಸಾಮಾಜಿಕ ಅಪಹಾಸ್ಯಕ್ಕೊಳಗಾಗಿದ್ದರು. ಈ ಕಾರಣಕ್ಕಾಗಿ ಗುರುಗಳು ಮೂರ್ತೆದಾರಿಕೆ ಹಾಗೂ ಮದ್ಯಪಾನ ನಿಷೇಧಕ್ಕೆ ಕರೆಕೊಟ್ಟರು. ಬದಲಿಗೆ ಕೃಷಿ, ನೇಕಾರಿಕೆ ಮತ್ತು ತೆಂಗಿನ ನಾರಿನ ಪದಾರ್ಥಗಳ ತಯಾರಿ ಈ ವೃತ್ತಿಗಳನ್ನು ಕೈಗೊಳ್ಳಲು ಆದೇಶಿಸಿದರು. ಮದ್ಯ ಎಂಬುದು ವಿಷ. ಒಂದು ಸಾಮೂಜಿಕ ರೋಗ. ಅದನ್ನು ತಯಾರಿಸಬೇಡಿ- ಮಾರಬೇಡಿ ಎಂದು ಘೋಷಿಸಿದರು. ತಿರುವಾಂಕೂರಿನ ಎಲ್ಲಾ ಈಳವರು ಗುರುಗಳ ಕರೆಗೆ ಓಗೊಟ್ಟು ಮೂರ್ತೆದಾರಿಕೆ ನಿಲ್ಲಿಸಿದರು. ಒಂದು ಪವಾಡವೇ ನಡೆಯಿತು.
2) ನಾಗಪೂಜೆ ನಿಷೇಧ: ನಾಗಗಳು ಇಚ್ಛಾಧಾರಿಗಳು, ಅವರಿಗೆ ಶಾಪಕೊಡುವ ಶಕ್ತಿಯಿದೆ ಎಂದು ನಂಬಿದ್ದ ಜನರು ನಾಗಪೂಜೆ ಮಾಡುತ್ತಿದ್ದರು. ಇದಕ್ಕಾಗಿ ಅಪಾರ ವೆಚ್ಚವಾಗುತ್ತಿತ್ತು ಗುರುಗಳು ನಾಗಪೂಜೆ ನಿಷೇಧಿಸಿದರು ಹಾಗೂ ನಾಗಬನದ ಕಲ್ಲುಗಳನ್ನೇ ತೆಗೆಯಲು ಜನರನ್ನು ಪ್ರೇರೇಪಿಸಿದರು. ಹೀಗಾಗಿ ಹಲವು ತೆರನಾದ ನಾಗದರ್ಶನ, ನಾಗಪೂಜೆ, ನಾಗಮಂಡಲಗಳು ಕೇರಳದಲ್ಲಿ ಅಂತ್ಯಗೊಂಡವು. ಮೂಢನಂಬಿಕೆಗಳ ವಿರುದ್ಧದ ಹೋರಾಟದಲ್ಲಿ ಗುರುಗಳು ಜಯ ಸಾಧಿಸಿದರು.
3) ಭೂತಪೂಜೆ ಪ್ರಾಣಿಬಲಿ ನಿಷೇಧ: ಭೂತಗಳನ್ನು ಮೆಚ್ಚಿಸಲು ಮಾಡಲಾಗುವ ಪ್ರಾಣಿಬಲಿ ಹಾಗೂ ಮದ್ಯಮಾಂಸವನ್ನು ದೇವರಿಗರ್ಪಿಸುವುದನ್ನು ನಾರಾಯಣಗುರು ವಿರೋಧಿಸಿದರು. ಚಂಬಳಂತಿಯ ಅವರ ಕುಟುಂಬಕ್ಕೆ ಸೇರಿದ ಮಣ್ಣಕ್ಕಲ್ ದೇವಳದಲ್ಲಿ ಭದ್ರಕಾಳಿಗೆ ಪ್ರಾಣಿಬಲಿ ಕೊಡಲಾಗುತ್ತಿತ್ತು. ಇದನ್ನು ವಿರೋಧಿಸಿದ ಗುರು ಭದ್ರಕಾಳಿ ವಿಗ್ರಹವನ್ನೇ ಕಿತ್ತೆಸೆದರು, ‘‘ಪ್ರಾಣಿಬಲಿ, ಜೀವ ತೆಗೆದವಳು ಜಗನ್ಮಾತೆ ಹೇಗಾದಳು’’ ಎಂದವರು ಪ್ರಶ್ನಿಸಿದರು.
4) ಅಂಧಶ್ರದ್ಧೆಗಳ ವಿರುದ್ಧ ಹೋರಾಟ: ಕೆಲವು ಅಸಹ್ಯ ಸಾಮಾಜಿಕ ಆಚರಣೆಗಳು ಕೇರಳದಲ್ಲಿ ಪ್ರಚಲಿತವಿದ್ದವು. ಈ ಅರ್ಥಹೀನ ಮತ್ತು ವೈಭವೋಪೇತ ಆಚರಣೆಗಳನ್ನು ಅವರು ನಿಲ್ಲಿಸಿದರು. ತಾಳಿಕೆಟ್ಟು ಕಲ್ಯಾಣವೆಂಬ ಅಣಕು ಮದುವೆಯನ್ನವರು ನಿಲ್ಲಿಸಿದರು ಹಾಗೂ ಸರಳವಿವಾಹಕ್ಕೆ ಒತ್ತುಕೊಟ್ಟರು. ಶತಮಾನಗಳಿಂದ ನಡೆದು ಬಂದಿದ್ದ ಈ ಸಾಮಾಜಿಕ ಅನಿಷ್ಟಗಳನ್ನು ಗುರು ಏಕಾಂಗಿಯಾಗಿ ಎದುರಿಸಿ ನಿಲ್ಲಿಸಿದರು. ಇದೊಂದು ದೊಡ್ಡ ಅದ್ಭುತ. ಅವರು ಅತ್ಯಂತ ಪ್ರಾಕ್ಟಿಕಲ್ ಸಂತ.
5) ಶಿಕ್ಷಣಕ್ರಾಂತಿ: ಶತಮಾನಗಳಿಂದ ಅವಿದ್ಯೆ, ಅಜ್ಞಾನಗಳಿಂದ ಬಾಧಿತರಾಗಿ ಪ್ರಾಣಿಗಳಂತೆ ಬದುಕುತ್ತಿದ್ದ ಅವರ್ಣರ ಬಾಳಲ್ಲಿ ಆಶಾಕಿರಣವಾಗಿ ಬಂದ ಗುರು ಅವರಿಗೆ ಶಿಕ್ಷಣ ಕೊಡುವ ದೀಕ್ಷೆ ತೊಟ್ಟರು. ಹಲವು ಶಾಲಾ ಕಾಲೇಜುಗಳು ಸ್ಥಾಪನೆಯಾಗಿ ಶೂದ್ರರಿಗೆ ಸಂಸ್ಕೃತ, ಇಂಗ್ಲಿಷ್ ಭಾಷೆಗಳನ್ನು ಕಲಿಸುವ ವ್ಯವಸ್ಥೆ ಮಾಡಲಾಯಿತು. ಅವರು ಮಂಡಿಸಿದ ತ್ರಿಭಾಷಾ ಸೂತ್ರದ ಪ್ರಕಾರ ಸರಕಾರದ ವ್ಯವಹಾರಗಳನ್ನು ಅರಿಯಲು ಇಂಗ್ಲಿಷ್ ಭಾಷೆ, ಮಾತೃಭಾಷೆ ಮಲಯಾಳಂ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಅರಿಯಲು ಸಂಸ್ಕೃತ ಈ ಮೂರು ಭಾಷೆಗಳನ್ನು ಕಲಿಸಲು ಉದ್ದೇಶಿಸಲಾಯಿತು. ಅಲ್ಲದೆ ಅವರು ವಯಸ್ಕರ ಶಿಕ್ಷಣ, ರಾತ್ರಿಶಾಲೆ ಮತ್ತು ವಿದ್ಯಾರ್ಥಿ ವೇತನಗಳ ಬಗ್ಗೆ ಒತ್ತುಕೊಟ್ಟು ವಸತಿ ಸೌಕರ್ಯವಿರುವ ಶಾಲೆಗಳನ್ನೂ ಸ್ಥಾಪಿಸಿದರು. ಹೀಗೆ ನಾರಾಯಣಗುರುಗಳು ಕೇವಲ ಆಧ್ಯಾತ್ಮಿಕ ಚಿಂತನೆಯಲ್ಲೇ ಮುಳುಗದೆ ಸಮಾಜದ ಉದ್ಧಾರಕ್ಕಾಗಿ ಹಲವಾರು ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡರು. ವಿಚಾರವಾದಿಯಾಗಿ ಮೂಡನಂಬಿಕೆ, ಅಂಧಶದ್ಧೆಗಳ ವಿರುದ್ಧ ಹೋರಾಡಿ ಹೊಸದಾರಿಯನ್ನೇ ಹುಟ್ಟುಹಾಕಿದರು. ನಿಜವಾದ ಅರ್ಥದಲ್ಲಿ ಅವರೊಬ್ಬ ಕ್ರಾಂತಿಕಾರಿ.
ಧಾರ್ಮಿಕ ಕ್ರಾಂತಿಯ ವೈಶಿಷ್ಟ:
ಅವರ ಧಾರ್ಮಿಕ ಕ್ರಾಂತಿಯ ವೈಶಿಷ್ಟ ಇರುವುದು ಅವರು ಸ್ಥಾಪಿಸಿದ ದೇವಸ್ಥಾನಗಳು. ಶೂದ್ರರಿಗಾಗಿ ಅವರ್ಣರಿಗಾಗಿ ದೇವಸ್ಥಾನ ನಿರ್ಮಿಸಿದ ಶ್ರೀಗುರು 1888ರಲ್ಲಿ ಪ್ರಪ್ರಥಮವಾಗಿ ಅರವೀಪುರಂನಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದರು. ಅದಕ್ಕೆ ವಿರೋಧ ವ್ಯಕ್ತವಾದರೂ ತಕ್ಕ ಸಮರ್ಥನೆಯನ್ನಿತ್ತ ಗುರುಗಳು ಮುಂದೆ ಬೇರೆ ಬೇರೆಡೆ ಬೇರೆ ಬೇರೆ ಜನರಿಗಾಗಿ 41ಕ್ಕೂ ಮಿಕ್ಕ ದೇವಳಗಳನ್ನು ಸ್ಥಾಪಿಸಿದರು. ಅದರಲ್ಲಿ ಮಂಗಳೂರಿನ ಶ್ರೀಗೋಕರ್ಣನಾಥ ದೇವಾಲಯವೂ ಒಂದು. ಅರವೀಪುರಂನಲ್ಲಿ ಸ್ಥಾಪಿಸಿದ ಶಿವಲಿಂಗ ನಯ್ಯಾರ್ ನದಿಯಿಂದ ಎತ್ತಿ ತಂದ ಕಲ್ಲು. ಅವರು ಆಚಾರ ವಿಚಾರ ಆಚರಣೆಗಳಿಗಿಂತ ಭಾವಕ್ಕೆ, ಭಕ್ತಿಗೆ ಪ್ರಾಶಸ್ತ್ಯಕೊಟ್ಟವರು. ಮಹಾಶಿವರಾತ್ರಿಯಂದು ಧ್ಯಾನಕ್ಕೆ ಕುಳಿತ ಗುರು ರಾತ್ರಿ ಮೂರು ಗಂಟೆಗೆ ನೀರಿಗಿಳಿದು ಕಲ್ಲನ್ನೆತ್ತಿಕೊಂಡು ಬಂದು ಅದನ್ನೇ ಶಿವಲಿಂಗವೆಂದು ಪ್ರತಿಷ್ಠಾಪಿಸಿದರು. ಈ ಚರಿತ್ರಾರ್ಹ ಗಳಿಗೆಯಲ್ಲಿ ಕ್ರಾಂತಿಯ ಕಿಡಿ ಹಚ್ಚಲ್ಪಟ್ಟಿತು. ತನ್ನ ಸಾಮಾಜಿಕ ಕ್ರಾಂತಿಯನ್ನು ಧಾರ್ಮಿಕ ಕ್ರಾಂತಿಯ ಜೊತೆ ಸಮೀಕರಿಸಿದರು. ವೇದಾಧ್ಯಯನ ವೇದಶಿಕ್ಷಣ ಕೊಡುವ ತರಬೇತಿ ಕೇಂದ್ರಗಳು ಶಿವಗಿರಿಯಲ್ಲಿ ಸ್ಥಾಪನೆಯಾದವು. ನಾರಾಯಣಗುರು ಸ್ಥಾಪಿಸಿದ ದೇಗುಲಗಳಲ್ಲಿ ಯಾವುದೇ ಪ್ರಚಾರದ ಅಬ್ಬರಗಳಿಲ್ಲ. ಸರಳವಾದ ಭಕ್ತಿ, ಶ್ರದ್ಧಾಪೂರ್ವಕ ಪ್ರಾರ್ಥನೆ ಮುಖ್ಯವಾಗಿತ್ತು. ದೇವಳಗಳು ಭಕ್ತಿ ಕೇಂದ್ರಗಳಾಗುವ ಜೊತೆಗೆ ಸಾಮಾಜಿಕ ಕ್ರಾಂತಿಯ ಕಾರ್ಯಕ್ಷೇತ್ರಗಳೂ ಆದವು. ಅವರ್ಣರು ತಮ್ಮ ಉನ್ನತಿಗಾಗಿ ಕ್ರಿಯಾಯೋಜನೆ ತಯಾರಿಸಲು ಕಾರಣಗಳಾದವು. ಹೆಚ್ಚಿನ ದೇವಳಗಳ ಜೊತೆ ಶೈಕ್ಷಣಿಕ ಕೇಂದ್ರಗಳೂ ಸ್ಥಾಪನೆಗೊಂಡು ಅಭಿವೃದ್ಧಿಗೆ ಹೊಸ ಆಯಾಮಗಳನ್ನು ನೀಡಿದವು.
ಕೆಲವು ಕ್ರಾಂತಿಕಾರಿ ಹೆಜ್ಜೆಗಳು
1. ಚಿದಂಬರ ದೇವಳದಲ್ಲಿ ಗುರು ವಿಗ್ರಹದ ಜಾಗದಲ್ಲಿ ಉರಿಯುವ ದೀಪವನ್ನಿರಿಸಿದರು. ‘ತಮಸೋಮಾ ಜ್ಯೋತಿರ್ಗಮಯ’ ಎಂಬಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗುವ ಸಂದೇಶವನ್ನು ಇದು ಕೊಟ್ಟಿತು. 1920ರಲ್ಲಿ ಹಚ್ಚಿದ ಈ ದೀಪ ಈ ದೇವಳದಲ್ಲಿ ಇಂದೂ ಉರಿಯುತ್ತಾ ನಿರಾಕಾರ ಬ್ರಹ್ಮನನ್ನು ಪ್ರತಿನಿಧಿಸುತ್ತದೆ.
2. 1927ರಲ್ಲಿ ಶಕ್ತೇಶ್ವರ ಕ್ಷೇತ್ರದಲ್ಲಿ ವಿಗ್ರಹದ ಬದಲು ಗುರು ಒಂದು ಕನ್ನಡಿಯನ್ನು ಇರಿಸಿದರು. ಈ ಕನ್ನಡಿಯಲ್ಲಿ ‘ಓಂಶಾಂತಿ’ ಎಂದು ಬರೆದಿತ್ತು. ಇದರ ಎದುರು ಅರ್ಧನಾರೀಶ್ವರ ವಿಗ್ರಹವನ್ನು ಸ್ಥಾಪಿಸಲಾಯಿತು. ಕನ್ನಡಿಯ ಬಿಂಬ ಭಕ್ತರಿಗೆ ತನ್ನಲ್ಲಿರುವ ಆತ್ಮಸ್ವರೂಪ ದೇವನನ್ನು ನೆನೆದುಕೊಳ್ಳಬೇಕೆಂಬ ಸಂದೇಶ ನೀಡುತ್ತಿದೆ.
3. ಕುನ್ನಂಪಾರ ಸುಬ್ರಹ್ಮಣ್ಯ ದೇವಳದ ಸ್ಥಾಪನೆಯ ಹಿಂದೆ ಒಂದು ಕಥೆಯಿದೆ. ಆ ಊರ ತುಂಬಾ ಕುಷ್ಟರೋಗಿಗಳು ತುಂಬಿದ್ದರು. ಅಲ್ಲಿಯ ಒಬ್ಬ ಶ್ರೀಮಂತ ಕೊಚ್ಚುಕುಟ್ಟಿ ವೈದ್ಯರ್ ತನ್ನ ಕುಟುಂಬದ ಅನೇಕ ಕುಷ್ಟರೋಗಿಗಳನ್ನು ಗುರು ಔಷಧ ಕೊಟ್ಟು ಗುಣಪಡಿಸಿದ್ದಕ್ಕಾಗಿ ತನ್ನ 20 ಎಕರೆ ಭೂಮಿಯನ್ನು ದೇವಳಕ್ಕಾಗಿ ಬಿಟ್ಟು ಕೊಡುತ್ತಾನೆ. ಅಲ್ಲಿ ಗುರು ಸುಬ್ರಹ್ಮಣ್ಯ ವಿಗ್ರಹ ಸ್ಥಾಪಿಸಿದರು.
4. ಮನ್ನಂತಲ ಆನಂದವಲ್ಲಿ ದೇವಳದಲ್ಲಿ ಆದಿಶಕ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಅದರ ಮೊದಲು ಅಲ್ಲಿದ್ದ ಭದ್ರಕಾಳಿ ವಿಗ್ರಹವನ್ನು ಪ್ರಾಣಿವಧೆ ವಿರೋಧಿಸಲು ಗುರು ಎದುರಿನ ಕೊಳಕ್ಕೆ ಬಿಸಾಕಿದರೆಂದು ಹೇಳಲಾಗುತ್ತಿದೆ.
5. ಕೊಲತ್ತುಕಾರ ಕ್ಷೇತ್ರ: ಇಲ್ಲಿಯೂ ಭದ್ರಕಾಳಿ ವಿಗ್ರಹವಿದ್ದು ಪ್ರಾಣಿ ಬಲಿ ನಡೆಯುತ್ತಿತ್ತು. ಅದರ ಬದಲು ದೇವಳದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದರು. ಪ್ರಾಣಿಬಲಿ ನಿಂತಿತು.
ಗುರುಗಳ ಈ ಮಹಾನ್ ಕ್ರಾಂತಿಯಲ್ಲಿ ಸಹಾಯಹಸ್ತ ನೀಡಿದವರು ಕೇರಳದ ಮಹಾನ್ ಕವಿ ಕುಮಾರನ್ ಆಶಾನ್, ಹಿಂದುಳಿದ ವರ್ಗದ ಪ್ರಥಮ ಡಾಕ್ಟರ್ ಡಾ. ಪಲ್ಲಪು (ಪದ್ಮನಾಭನ್), ಎಸ್.ಎನ್.ಡಿ.ಪಿ.ಯ ಪ್ರಥಮ ಅಧ್ಯಕ್ಷ ಬ್ಯಾರಿಸ್ಟರ್ ಪರಮೇಶ್ವರ ಪಿಳ್ಳೈ, ಪತ್ರಕರ್ತ, ರಾಜಕಾರಣಿ ಟಿ.ಆರ್.ಮಾಧವನ್, ಡಾ.ಪಲ್ಪು ಅವರ ಮಗ ನಟರಾಜಗುರು ಮೊದಲಾದವರು ಈ ಕ್ರಾಂತಿಯಲ್ಲಿ ಜತೆಗೂಡಿದರು.
ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಈ ಸಂಸ್ಥೆಯನ್ನು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಳಿಗಾಗಿ ಸ್ಥಾಪಿಸಲಾಯಿತು. ಜೊತೆಗೆ 1928ರಲ್ಲಿ ಸನ್ಯಾಸಿಗಳ ಸಂಘಟನೆ ‘ಶ್ರೀ ನಾರಾಯಣ ಗುರು ಧರ್ಮಸಂಘ’ವನ್ನು ಸ್ಥಾಪಿಸಲಾಯಿತು. 1924ರಲ್ಲಿ ಎಸ್.ಎನ್.ಡಿ.ಪಿ.ಯ ಆಶ್ರಯದಲ್ಲಿ ಚರಿತ್ರಾರ್ಹವಾದ ಏಶ್ಯದ ಪ್ರಥಮ ಸರ್ವಧರ್ಮ ಸಮ್ಮೇಳನವನ್ನು ನಡೆಸಲಾಯಿತು. ಈ ಸಮ್ಮೇಳನದ ಧ್ಯೇಯ ವಾಕ್ಯ ಹೀಗಿತ್ತು: ‘‘ಈ ಸಮ್ಮೇಳನ ವಾದಗಳಿಗಾಗಿ ಮತ್ತು ವಾದಗಳಿಂದ ಗೆಲ್ಲುವುದಕ್ಕಾಗಿ ಅಲ್ಲ. ಇದು ತಿಳಿಯುವು ದಕ್ಕಾಗಿ ಮತ್ತು ತಿಳಿಸುವುದಕ್ಕಾಗಿ’’ ಇದರ ಮೂಲಕ ವಿಶ್ವಭ್ರಾತೃತ್ವದ ಸಂದೇಶ ಪ್ರಥಮ ಬಾರಿಗೆ ವಿಶ್ವಾದ್ಯಂತ ಪಸರಿಸಿತು. ಆ ಸಮಯದಲ್ಲಿ ಗುರು ಭಾರತದ ಅತಿಗಣ್ಯರಾದ ರವೀಂದ್ರನಾಥ ಟಾಗೋರ್, ಮಹಾತ್ಮಾಗಾಂಧಿ, ವಿನೋಬಾಭಾವೆ, ರಮಣಮಹರ್ಷಿ ಮೊದಲಾದವರನ್ನು ಭೇಟಿಯಾಗಿ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು. ಚಿಕ್ಕಂದಿನಲ್ಲಿ ಸಂಸ್ಕೃತ ಮತ್ತು ಮಲಯಾಳಂನಲ್ಲಿ ಪ್ರಬುದ್ಧತೆ ಪಡೆದ ಶ್ರೀ ನಾರಾಯಣಗುರು ಅತ್ಯುತ್ಕೃಷ್ಟ ಮಟ್ಟದ ಅನೇಕ ಆಧ್ಯಾತ್ಮಿಕ ಗ್ರಂಥಗಳನ್ನು ಬರೆದರು. ವೇದಾಂತದ ಬಗ್ಗೆ ವೇದಾಂತಸೂತ್ರ, ದರ್ಶನಮಾಲಾ, ಅದ್ವೈತ ತತ್ವದ ‘ಆತ್ಮೋಪದೇಶ ಶತಕಂ’ ಅವರ ಪ್ರಮುಖ ಗ್ರಂಥಗಳು. ಅವರ ಹೆಚ್ಚಿನ ಗ್ರಂಥಗಳನ್ನು ನಟರಾಜಗುರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇವು ದೇವರನ್ನು ಸ್ತುತಿಸುವ ಶ್ಲೋಕಗಳನ್ನೂ ಒಳಗೊಂಡಿದೆ.
ಹೀಗೆ ಒಬ್ಬ ತತ್ವಜ್ಞಾನಿಯಾಗಿ, ಚಿಂತಕನಾಗಿ, ಬರಹಗಾರನಾಗಿ, ಆಧ್ಯಾತ್ಮಿಕ ಗುರುವಾಗಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಸಾಮಾಜಿಕ ಯುಗಪ್ರವರ್ತಕ ಕ್ರಾಂತಿಕಾರಿಯಾಗಿ ಬಾಳಿದ ಬ್ರಹ್ಮಶ್ರೀ ನಾರಾಯಣಗುರು ಕಳೆದ ಶತಮಾನ ಕಂಡ ಅತ್ಯಪೂರ್ವ ಮಾನವತಾವಾದಿ ಸಂತ.
(ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹೊರತಂದ, ಮುದ್ದು ಮೂಡುಬೆಳ್ಳೆ ಸಂಪಾದಿತ ‘ಶ್ರೀ ನಾರಾಯಣಗುರು ಸಾಧನಾ ಪಥ’ ಕೃತಿಯಿಂದ ಆಯ್ದ ಭಾಗ)







