ದಕ್ಷಿಣದವರು 'ಜೋಡೋ' ಯಾತ್ರೆ ಮುಗಿಸಿ ಉತ್ತರ ತಲುಪುವಾಗ ಅಲ್ಲಿ ಕಾಂಗ್ರೆಸ್ ಇರಲ್ಲ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ
''ಡಿಕೆಶಿ ವಿರುದ್ಧ ಯಾವ ರೀತಿಯ ತನಿಖೆ ಎಂದು ಮುಂದಿನ ದಿನಗಳಲ್ಲಿ ಹೇಳುತ್ತೇನೆ''

ಸಚಿವ ವಿ.ಸುನಿಲ್ ಕುಮಾರ್
ಉಡುಪಿ, ಸೆ.10: ಇಂಧನ ಇಲಾಖೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ತನಿಖೆಗೆ ಅವರೇ ಸವಾಲು ಹಾಕಿದ್ದಾರೆಯೇ ಹೊರತು ನಾನು ಹಾಕಿಲ್ಲ. ಅವರು ಹಾಕಿರುವ ಸವಾಲು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದೇನೆ. ಈ ಬಗ್ಗೆ ಯಾವ ರೀತಿ ತನಿಖೆ ನಡೆಸುವುದು ಎಂಬುದನ್ನು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ. ಸರಕಾರಿ ಹಂತದಲ್ಲಿ ತನಿಖೆ ಆಗುವಾಗ ಎಲ್ಲರಿಗೂ ಗೊತ್ತಾಗುತ್ತದೆ. ಏನಾಗುತ್ತೆ ಎಂಬುದನ್ನು ಮುಂದೆ ಕಾದು ನೋಡಿ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿದ ಅವರು, ದೇಶ ಮುರಿದವರು ಭಾರತ ಜೋಡೋ ಹೇಗೆ ಮಾಡುತ್ತಾರೆ? ದೇಶ ಮುರಿದವರಿಗೆ ಭಾರತ್ ಜೋಡೋ ಮಾಡುವ ನೈತಿಕತೆ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ. ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕು. ದಕ್ಷಿಣದಲ್ಲಿ ಕಾಂಗ್ರೆಸ್ ಜೋಡೋ ನಡೆಯುತ್ತಿದ್ದರೆ, ಉತ್ತರದಲ್ಲಿ ಹಿರಿಯ ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ದಕ್ಷಿಣದವರು ಯಾತ್ರೆ ಮುಗಿಸಿ ಉತ್ತರ ತಲುಪುವಾಗ ಅಲ್ಲಿ ಕಾಂಗ್ರೆಸ್ ಇರಲ್ಲ. ಒಬ್ಬರೇ ಏಕಾಂಗಿಯಾಗಿ ಪಾದಯಾತ್ರೆ ಮಾಡುವ ಪರಿಸ್ಥಿತಿ ಬರಬಹುದು. ಆದುದರಿಂದ ಪಾದಯಾತ್ರೆ ಮೊಟಕುಗೊಳಿಸಿ ಕಾಂಗ್ರೆಸ್ ಉಳಿಸಿಕೊಳ್ಳುವುದು ಮಾಡಲಿ ಎಂದು ಟೀಕಿಸಿದರು.
'ಪ್ರಾಕೃತಿಕ ವಿಕೋಪ ಹಾನಿಗೆ ಸಂಬಂಧಿಸಿ ಕೇಂದ್ರದ ನಾಲ್ಕು ಅಧ್ಯಯನ ತಂಡ ಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತಿವೆ. ಇಷ್ಟು ತ್ವರಿತವಾಗಿ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿರುವುದು ಇದೇ ಮೊದಲ ಬಾರಿ. ರಾಜ್ಯ ಸರಕಾರದ ವಿನಂತಿ ಮೇರೆಗೆ ಕೇಂದ್ರ ಸರಕಾರ ತಕ್ಷಣವೇ ತಂಡವನ್ನು ಕಳುಹಿಸಿದೆ. ಕರಾವಳಿಯಲ್ಲಿ ಆಗಮಿಸಿ ರುವ ತಂಡಕ್ಕೆ ಬೆಳೆ, ಕೃಷಿ, ಮೂಲಭೂತ ಸೌಕರ್ಯ ಹಾನಿಗೆ ಸಂಬಂಧಿಸಿ ಎರಡು ಜಿಲ್ಲೆಗಳಿಂದ ವರದಿ ನೀಡಲಾಗಿದೆ. ಈ ವರದಿ ಆಧಾರದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ಒತ್ತಡ ಹಾಕಲಾಗುವುದು' ಎಂದರು.
'ಸರಕಾರ ಕೈಕಟ್ಟಿ ಕುಳಿತಿಲ್ಲ'
ಬೆಂಗಳೂರು ಮಹಾನರೆ ಸರಕಾರ ವೈಫಲ್ಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ನೆರೆ ಉಂಟಾಗಿದೆ. 100-200 ವರ್ಷಗಳಲ್ಲಿ ಈ ಪ್ರಮಾಣದ ಮಳೆ ಇದೇ ಮೊದಲ ಬಾರಿಗೆ ಆಗಿರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. ಏಕಕಾಲದಲ್ಲಿ ಮಳೆ ಸುರಿದರೆ ಪ್ರವಾಹ ಬಂದೇ ಬರುತ್ತದೆ. ನೆರೆಯನ್ನು ಸಮರ್ಥವಾಗಿ ನಿರ್ವಹಿಸ ಬೇಕು ಎಂಬುದು ಜನರ ಅಭಿಪ್ರಾಯ. ನಾವು ಜನರ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಹೇಳಿದರು. ಈ ವಿಚಾರದಲ್ಲಿ ರಾಜ್ಯ ಸರಕಾರ ಕೈ ಕಟ್ಟಿಕೊಂಡು ಕುಳಿತಿಲ್ಲ. ಇಂಧನ ಇಲಾಖೆ 1500 ವಿದ್ಯುತ್ ಕಂಬಗಳನ್ನು 48 ಗಂಟೆಗಳಲ್ಲಿ ಸರಿಪಡಿಸಿದೆ. ಅದೇ ರೀತಿ ಎಲ್ಲ ಇಲಾಖೆಗಳು ತ್ವರಿತವಾಗಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ನೆರೆ ಉಂಟಾಗಿರುವುದರಿಂದ ಈ ವಿಚಾರಕ್ಕೆ ಮಹತ್ವ ದೊರಕಿದೆ. ಪ್ರಕೃತಿಯ ಮುಂದೆ ನಾವೆಲ್ಲರೂ ತಲೆಬಾಗಲೇಬೇಕು. ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಚ್ಚರಿಕೆ ಏನು ಎಂಬುದು ಅರಿವಾಗಿದೆ. ಮುಖ್ಯಮಂತ್ರಿಗಳು ಮತ್ತು ಅಲ್ಲಿನ ಎಲ್ಲ ಜನಪ್ರತಿನಿಧಿಗಳು ತಕ್ಷಣದ ಕ್ರಮ ಕೈಗೊಂಡಿದ್ದಾರೆ ಎಂದರು.
ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯಗೆ ಉಚಿತ ದೋಸೆ ರವಾನೆ ಮಾಡುವ ಮೂಲಕ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ
ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರಕಾರದ ಒಂದು ವರ್ಷದ ಕಾರ್ಯಕ್ರಮವನ್ನು ಜನಮಾನಸಕ್ಕೆ ತಿಳಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಎರಡು ಮೂರು ಜಿಲ್ಲೆಗಳಿಗೆ ಸೀಮಿತವಾಗಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಳೆಯ ಕಾರಣಕ್ಕೆ ಮುಂದೂಡಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಭೂತಪೂರ್ವ ಯಶಸ್ಸು, ಜನರ ಸ್ಪಂದನ, ಪ್ರತಿಕ್ರಿಯೆ ನೋಡಿ ಮುಂದೆ ಈ ಜನಸ್ಪಂದನ ಕಾರ್ಯಕ್ರಮ ವನ್ನು ಇಡೀ ರಾಜ್ಯ ವಿಸ್ತರಿಸಲು ಚಿಂತನೆ ಮಾಡಲಾಗಿದೆ. ಎಲ್ಲ ವಿಭಾಗದಲ್ಲೂ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದರು.
‘ಮಹಾಪುರುಷರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು’
ದ.ಕ. ಜಿಲ್ಲೆಯಲ್ಲಿ ನಾರಾಯಣ ಗುರು ಜಯಂತಿ ಬಗ್ಗೆ ನಡೆಯುತ್ತಿರುವಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಇದು ಚರ್ಚೆಯ ವಿಷಯವೇ ಅಲ್ಲ. ಎಲ್ಲ ಮಹಾಪುರುಷರ ಜಯಂತಿಗಳನ್ನು ಬೇರೆ ಬೇರೆ ಜಿಲ್ಲೆ ಗಳಲ್ಲಿ ಆಚರಿಸಲು ಸರಕಾರ ಆರು ತಿಂಗಳ ಹಿಂದೆಯೇ ನಿರ್ಧರಿಸಿತ್ತು. ಕೇವಲ ಬೆಂಗಳೂರು ಕೇಂದ್ರೀಕೃತವಾಗಿ ಯಾವುದೇ ಆಚರಣೆ ನಡೆಯಬಾರದು ಎಂಬುದು ನಮ್ಮ ಆಶಯವಾಗಿದೆ. ಬೆಂಗಳೂರು ಮಾತ್ರವಲ್ಲ ಪ್ರತಿ ಜಿಲ್ಲೆಯನ್ನು ಕೇಂದ್ರೀಕರಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಎಲ್ಲ ಮಹಾಪುರುಷರು, ದಾರ್ಶನಿಕರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು. ಎಲ್ಲಾ ಸಮುದಾಯದವರು ಸೇರಿ ಒಂದೊಂದು ಜಯಂತಿ ಆಚರಿಸಬೇಕು. ಈವರೆಗೆ ನಾವು ಮಹಾಪುರುಷರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಿ ಅವರ ಆದರ್ಶಗಳನ್ನು ಒಂದು ವ್ಯವಸ್ಥೆಗೆ ಸೀಮಿತಗೊಳಿಸಿದ್ದೇವೆ. ಇದು ಆಗಬಾರದು ಎಂಬ ಉದ್ದೇಶದಿಂದ ಎಲ್ಲ ಮಹಾಪುರಷರ ಜಯಂತಿ ಯನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯ ವಿವಾದಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.







