ಧರ್ಮಗಳ ನಡುವೆ ವಾದ ಕೊನೆಗೊಳಿಸಿ ಶಾಂತಿ ಸ್ಥಾಪಿಸುವುದು ಅಗತ್ಯ: ಸಚಿವ ಸುನಿಲ್ ಕುಮಾರ್

ಉಡುಪಿ, ಸೆ.10: ಎಲ್ಲಾ ಧರ್ಮಗಳು ಮನುಷ್ಯನ ಒಳಿತನ್ನೇ ಬಯಸುತ್ತವೆ ಎಂಬ ನಾರಾಯಣಗುರುಗಳ ಸಂದೇಶ ಅರಿಯುವ ಮೂಲಕ ವಿಶ್ವದಾದ್ಯಂತ ವಿವಿಧ ಧರ್ಮಗಳ ನಡುವೆ ನಡೆಯುತ್ತಿರುವ ವಾದವನ್ನು ಕೊನೆಗಾಣಿಸಿ, ವಿಶ್ವಶಾಂತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬನ್ನಂಜೆ ಬಿಲ್ಲವರ ಸೇವಾ ಸಂಘದ ಸಹಯೋಗದಲ್ಲಿ ಶನಿವಾರ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಧರ್ಮಗಳ ಮೂಲ ಉದ್ದೇಶ ಮನುಷ್ಯನಿಗೆ ಒಳಿತನ್ನು ಮಾಡುವ ಮೂಲಕ ವಿಶ್ವಶಾಂತಿ ಮೂಡಿಸುವುದಾಗಿದೆ. ಧರ್ಮಗಳ ನಡುವೆ ವಾದ ಸೃಷ್ಠಿಸಲು ಅಥವಾ ವಿಜಯ ಸಾಧಿಸುವುದಲ್ಲ ಎಂಬ ನಾರಾಯಣ ಗುರುಗಳ ಸಂದೇಶ ವನ್ನು ಅರ್ಥಮಾಡಿಕೊಂಡು ಆ ಧರ್ಮದ ನೆಲೆಯಲ್ಲಿ ಎಲ್ಲರೂ ನಡೆಯುವುದು ಇಂದಿನ ಅಗತ್ಯ. ಶಿಕ್ಷಣದ ಮೂಲಕ ಬಲಯುತವಾಗಿ ಎಂಬ ಅವರ ಸಂದೇಶ ದಂತೆ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಾರಾಯಣ ಗುರುಗಳು ಸಂದೇಶ ಮತ್ತು ಆದಶರ್ಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾಜದಲ್ಲಿ ಸಮಾನತೆಯ ನಿರ್ಮಾಣಕ್ಕೆ ಅತ್ಯಂತ ಅಗತ್ಯ ವಾಗಿದೆ. ವ್ಯಕ್ತಿಯನ್ನು ಯಾವುದೇ ಜಾತಿಯಿಂದ ಅಳೆಯದೇ ಆತನ ವ್ಯಕ್ತಿತ್ವದಿಂದ ಗುರುತಿಸಬೇಕು. ಒಂದೇ ಜಾತಿ ಒಂದೇ ಮತ ಎಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ನಾರಾಯಣ ಗುರುಗಳ ಕುರಿತು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಉಪನ್ಯಾಸ ನೀಡಿದರು.ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಉಡುಪಿ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ, ಬಿಲ್ಲವರ ಸೇವಾ ಸಂಘ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಮಿತಾಂಜಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಾರಾಯಣಗುರು ಮದ್ಯಪಾನ ವಿರೋಧಿಸಿದ್ದರು
ಮಹಾ ಮಾನವತಾವಾದಿ, ದಾರ್ಶನಿಕ, ಆದ್ಯಾತ್ಮಿಕ ಸಾಧಕರಾಗಿದ್ದ ನಾರಾ ಯಣ ಗುರುಗಳು ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕಾಗಿ, ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿದ್ದರು. ವಿದ್ಯೆಯಿಂದ ವ್ಯಕ್ತಿಯ ಬದುಕು ಶ್ರೀಮಂತ ವಾಗಲಿದೆ ಎಂದು ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಸರಳ ವಿವಾಹ, ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದ್ದ ಅವರು ಬಾಲ್ಯ ವಿವಾಹ, ಮದ್ಯಪಾನವನ್ನು ವಿರೋಧಿಸಿದ್ದರು. ಇವರ ತತ್ವ ಆದರ್ಶಗಳನ್ನು ತಿಳಿದ ಮಹಾತ್ಮ ಗಾಂಧೀಜಿ ಮತ್ತು ಅಚಾರ್ಯ ವಿನೋಬಾ ಭಾವೆ ಇವರನ್ನು ಬೇಟಿ ಮಾಡಿ ಚರ್ಚಿಸಿದ್ದರು ಎಂದು ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಹೇಳಿದರು.







